ನವದೆಹಲಿ:ಗುಜರಾತ್, ಬಿಹಾರ, ಕರ್ನಾಟಕ, ಅಸ್ಸೋಂ ಮತ್ತು ಪಂಜಾಬ್ ಸೇರಿದಂತೆ ಏಳು ರಾಜ್ಯಗಳಲ್ಲಿ ಪ್ರೌಢ ಶಾಲಾ ಹಂತದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣವು ಹೆಚ್ಚಾಗಿದೆ. 2021-22ರಲ್ಲಿ ಈ ಏಳು ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿ ಶೇ.12.6ಕ್ಕಿಂತ ಶಾಲೆ ಬಿಡುವ ಮಕ್ಕಳ ಪ್ರಮಾಣವು ಅಧಿಕವಾಗಿದೆ ಎಂದು ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.
2023-24ರ ಸಮಗ್ರ ಶಿಕ್ಷಾ ಕಾರ್ಯಕ್ರಮದ ಅನುಷ್ಠಾನದ ಕುರಿತು ಚರ್ಚಿಸಲು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ನಡೆದ ಯೋಜನಾ ಅನುಮೋದನೆ ಮಂಡಳಿ (Project Approval Board - PAB) ಸಭೆಗಳ ನಡಾವಳಿಗಳಿಂದ ಈ ಮಾಹಿತಿ ಲಭ್ಯವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಈ ವರ್ಷದ ಮಾರ್ಚ್ ಮತ್ತು ಮೇ ತಿಂಗಳಲ್ಲಿ ಈ ಸಭೆಗಳು ನಡೆಸಲಾಗಿತ್ತು.
ಯಾವ ರಾಜ್ಯದಲ್ಲಿ ಎಷ್ಟು ಡ್ರಾಪ್ಔಟ್?: 2030ರ ವೇಳೆಗೆ ಶಾಲಾ ಮಟ್ಟದಲ್ಲಿ ಶೇ.100ರಷ್ಟು ಒಟ್ಟು ದಾಖಲಾತಿ ದರ (Gross Enrolment Rate - GER) ಗುರಿಯನ್ನು ಸಾಧಿಸುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಯಾಗಿದೆ. ಆದರೆ, ಈ ಡ್ರಾಪ್ಔಟ್ ಪ್ರಮಾಣವು ತಡೆಗೋಡೆಯಾಗಿ ಸರ್ಕಾರ ಪರಿಗಣಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2021-22ರಲ್ಲಿ ಪ್ರೌಢ ಹಂತದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣವು ದರವು ಬಿಹಾರದಲ್ಲಿ ಶೇ.20.46ರಷ್ಟು ಇದೆ. ನಂತರದಲ್ಲಿ ಗುಜರಾತ್‌ನಲ್ಲಿ ಶೇ.17.85ರಷ್ಟು, ಅಸ್ಸೋಂನಲ್ಲಿ ಶೇ.20.3ರಷ್ಟು, ಆಂಧ್ರ ಪ್ರದೇಶದಲ್ಲಿ ಶೇ.16.7ರಷ್ಟು, ಪಂಜಾಬ್ನಲ್ಲಿ ಶೇ.17.2ರಷ್ಟು ಮತ್ತು ಮೇಘಾಲಯದಲ್ಲಿ ಶೇ.21.7ರಷ್ಟು ಹಾಗೂ ಕರ್ನಾಟಕದಲ್ಲಿ ಶೇ.14.6ರಷ್ಟಿದೆ ಎಂದು ಮಾಹಿತಿ ಲಭ್ಯವಾಗಿದೆ.
ಪಶ್ಚಿಮ ಬಂಗಾಳದಲ್ಲಿ 2020-21ರಿಂದ 2021-22ರವರೆಗೆ ವಿಶೇಷವಾಗಿ ಪ್ರಾಥಮಿಕ ಹಂತದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣವು ಗಣನೀಯವಾಗಿ ಸುಧಾರಿಸಿದೆ. ಆದರೂ, ಮತ್ತಷ್ಟು ಕಡಿಮೆ ಮಾಡಲು ಮತ್ತು ಪ್ರೌಢಶಾಲಾ ಹಂತದಲ್ಲಿ ಇನ್ನಷ್ಟು ದರವನ್ನು ಸುಧಾರಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಕೊರೊನಾ ನಂತರ ಕರ್ನಾಟಕದಲ್ಲಿ ಶಾಲಾ ಮಕ್ಕಳ ಕಲಿಕಾ ಮಟ್ಟ ಕುಸಿತ: ಎಎಸ್ಇಆರ್ ವರದಿ
ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಶಾಲೆಯಿಂದ ಹೊರಗುಳಿದ ಸಾಕಷ್ಟು ಮಕ್ಕಳಿದ್ದಾರೆ. ಮುಖ್ಯವಾಹಿನಿಯ ಶಾಲೆಯಿಂದ ಹೊರಗುಳಿದ ಮಕ್ಕಳ ವಿವರಗಳನ್ನು ಪ್ರಬಂಧ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕೆಂದು ತಿಳಿಸಲಾಗಿದೆ. ಮಧ್ಯ ಪ್ರದೇಶದಲ್ಲಿ ಪ್ರೌಢ ಹಂತದಲ್ಲಿ 2020-21ರಲ್ಲಿ ಶೇ.23.8ರಷ್ಟಿದ್ದ ಡ್ರಾಪ್ಔಟ್ ಪ್ರಮಾಣವು 2021-22ರಲ್ಲಿ ಶೇ.10.1ಕ್ಕೆ ಇಳಿದಿದೆ. ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದ ರಾಜ್ಯದಲ್ಲಿ ಪ್ರತಿ ವರ್ಷ ವಿಶೇಷ ದಾಖಲಾತಿ ಅಭಿಯಾನವನ್ನು ನಡೆಸುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಮಾಧ್ಯಮಿಕ ಮಟ್ಟದಲ್ಲಿ ವಾರ್ಷಿಕ ಸರಾಸರಿ ಶಾಲೆ ಬಿಡುವ ಮಕ್ಕಳ ಪ್ರಮಾಣವು ಒಂದು ವರ್ಷದ ಅವಧಿಯಲ್ಲಿ ಶೇ.11.2ರಿಂದ ಶೇ.10.7ಕ್ಕೆ ಇಳಿದಿದೆ. ಇದೇ ವೇಳೆ ಮಹಾರಾಷ್ಟ್ರದ ಐದು ಜಿಲ್ಲೆಗಳಲ್ಲಿ ಶಾಲೆ ಬಿಡುವವರ ಪ್ರಮಾಣ ಶೇ.15 ಮತ್ತು ಅದಕ್ಕಿಂತ ಹೆಚ್ಚಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲೂ ಡ್ರಾಪ್‌ಔಟ್ ದರ ಅತ್ಯಂತ ಹೆಚ್ಚಿದೆ. ಈ ಪೈಕಿ ಬಸ್ತಿ (ಶೇ. 23.3), ಬುಡೌನ್ (ಶೇ.19.1), ಇಟಾವಾ (ಶೇ.16.9), ಗಾಜಿಪುರ (ಶೇ.16.6), ಇಟಾ ಜಿಲ್ಲೆಯಲ್ಲಿ ಶೇ.16.2ರಷ್ಟು ಶಾಲೆ ಬಿಡುವ ಮಕ್ಕಳ ಪ್ರಮಾಣ ದಾಖಲಾಗಿದೆ.
ರಾಜಸ್ಥಾನದಲ್ಲಿ ಇದರ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದೆ. ಆದರೆ ಪರಿಶಿಷ್ಟ ಪಂಗಡಗಳು (ಶೇ.9) ಮತ್ತು ಮುಸ್ಲಿಂ (ಶೇ.18) ಮಕ್ಕಳಲ್ಲಿ ಡ್ರಾಪ್ಔಟ್ ದರವು ಪ್ರೌಢ ಹಂತದಲ್ಲಿ ಇನ್ನೂ ಅತಿ ಹೆಚ್ಚು ಎಂದು ದಾಖಲೆಗಳು ತೋರಿಸಿವೆ. ಕಳೆದ ವರ್ಷ ವಿಶ್ವಸಂಸ್ಥೆಯ ಮಕ್ಕಳ ನಿಧಿಯ (ಯುನಿಸೆಫ್) ಸಮೀಕ್ಷೆಯು ಭಾರತದಲ್ಲಿ ಶೇ.33ರಷ್ಟು ಹೆಣ್ಣುಮಕ್ಕಳು ಮನೆಗೆಲಸದ ಕಾರಣದಿಂದ ಶಾಲೆಯನ್ನು ಬಿಡುತ್ತಾರೆ ಎಂದು ಹೇಳಿತ್ತು. ಶಾಲೆ ಬಿಟ್ಟ ನಂತರ ಮಕ್ಕಳು ಕುಟುಂಬ ಸಮೇತ ಕೂಲಿ ಕೆಲಸ ಮಾಡುವುದು ಅಥವಾ ಮನೆಗೆಲಸದಲ್ಲಿ ತೊಡಗುವುದು ಹಲವೆಡೆ ಕಂಡು ಬರುತ್ತದೆ ಎಂದು ಸಮೀಕ್ಷೆ ತಿಳಿಸಿತ್ತು.
ಇದನ್ನೂ ಓದಿ:ಪ್ರೌಢ ಶಾಲೆ ಪರೀಕ್ಷೆ ಬರೆಯಲು ಗಂಡನ ಮನೆಯಿಂದ ತಪ್ಪಿಸಿಕೊಂಡು ಬಂದ ಗೃಹಿಣಿ!