ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತದ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ್ದಾರೆ. ವಿಡಿಯೋ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಭಾರತದಂತೆಯೇ ಅಗ್ಗದ ರಷ್ಯಾದ ಕಚ್ಚಾ ತೈಲವನ್ನು ಪಡೆಯಲು ಬಯಸಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ. ದುರಾದೃಷ್ಟವಶಾತ್ ಅವಿಶ್ವಾಸ ನಿರ್ಣಯದಿಂದಾಗಿ ನನ್ನ ಸರ್ಕಾರವು ಪತನವಾಯಿತು ಎಂದಿದ್ದಾರೆ.
ಕಳೆದ 23 ವರ್ಷಗಳಲ್ಲಿ ಮಾಸ್ಕೋಗೆ ಭೇಟಿ ನೀಡಿದ ಮೊದಲ ಪಾಕಿಸ್ತಾನಿ ಪ್ರಧಾನಿ ಎಂಬ ಹೆಗ್ಗಳಿಕೆಗೆ ಇಮ್ರಾನ್ ಖಾನ್ ಪಾತ್ರರಾಗಿದ್ದರು. ದೇಶದಲ್ಲಿ ತಲೆದೋರಿರುವ ಆರ್ಥಿಕ ಕೊರತೆಯಿಂದಾಗಿ ಅಂದು ಯಾವುದೇ ಒಪ್ಪಂದವನ್ನ ಮಾಡಲು ಸಾಧ್ಯವಾಗಲಿಲ್ಲ. ಪಾಕಿಸ್ತಾನವು ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಅಡಿಯಲ್ಲಿ ತತ್ತರಿಸುತ್ತಿದೆ. ಉಕ್ರೇನ್ ಯುದ್ಧದ ಹೊರತಾಗಿಯೂ ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿದೆ. ನಾನು ಅಧಿಕಾರದಲ್ಲಿದ್ದಿದ್ದರೆ ನಮ್ಮ ದೇಶವೂ ಸಹ ಖರೀದಿಸಬಹುದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು. ಜೊತೆಗೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ನೆನೆಯುತ್ತ, ಕಳೆದ ವರ್ಷ ರಷ್ಯಾ- ಉಕ್ರೇನ್ ಸಂಘರ್ಷ ಪ್ರಾರಂಭವಾದ ದಿನದಂದು ನಾನು ರಷ್ಯಾದಲ್ಲಿದ್ದೆ ಎಂಬುದನ್ನು ವಿಡಿಯೋದಲ್ಲಿ ಇಮ್ರಾನ್ ಖಾನ್ ಉಲ್ಲೇಖಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳ ಒತ್ತಡದ ನಡುವೆಯೂ ತನ್ನ ಆರ್ಥಿಕತೆಯನ್ನು ಬೆಳೆಸುವ ಮತ್ತು ರಷ್ಯಾದ ತೈಲವನ್ನು ಖರೀದಿಸುವ ವಿಷಯದಲ್ಲಿ ಭಾರತದ ಸಾಧನೆಗಳನ್ನು ಖಾನ್ ಪ್ರಶಂಸಿಸುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಈ ಕುರಿತು ಮಾತನಾಡಿದ್ದಾರೆ. ಜಗತ್ತಿನಲ್ಲಿ ನವಾಜ್ ಹೊರತು ಪಡಿಸಿ ಬೇರೆ ಯಾವ ನಾಯಕರೂ ಕೋಟ್ಯಂತರ ರೂ ಆಸ್ತಿ ಹೊಂದಿಲ್ಲ. ನೀವೇ ಹೇಳಿ ನೋಡೋಣ, ಯಾವ ದೇಶದ ಪ್ರಧಾನಿ ಅಥವಾ ನಾಯಕನಿಗೆ ದೇಶದ ಹೊರಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದೆ ಎಂದು. ನಮ್ಮ ನೆರೆಯ ದೇಶದ ಪ್ರಧಾನಿ ನರೇಂದ್ರ ಮೋದಿ ಭಾರತದ ಹೊರಗೆ ಎಷ್ಟು ಆಸ್ತಿ ಹೊಂದಿದ್ದಾರೆ ಎಂಬುದರ ಬಗ್ಗೆ ಸೆಪ್ಟೆಂಬರ್ 2022 ರಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದರು ಅನ್ನೋದನ್ನು ಇಮ್ರಾನ್ ಖಾನ್ ಉಲ್ಲೇಖಿಸಿದ್ದರು.