ಇಂದು ಭಾರತದ ಗಣರಾಜ್ಯೋತ್ಸವಕ್ಕೆ 74ನೇ ಸಂಭ್ರಮ. ರಾಷ್ಟ್ರ ರಾಜಧಾನಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ವೈಭವಯುತ ಕಾರ್ಯಕ್ರಮದಲ್ಲಿ ದೇಶದ ಶಕ್ತಿ, ಸಾಮರ್ಥ್ಯಗಳು ಅನಾವರಣಗೊಳ್ಳಲಿವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಬ್ರಿಟಿಷ್ ದಾಸ್ಯದಿಂದ ಸಂಪೂರ್ಣವಾಗಿ ಹೊರಬಂದು ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡ ಮಹತ್ವದ ದಿನವಿದು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪಿತವಾದ ಭವ್ಯ ಸಂವಿಧಾನವನ್ನು ಜನವರಿ 26, 1950 ರಂದು ಜಾರಿ ಮಾಡಲಾಯಿತು.
1949 ರ ನವೆಂಬರ್ 26 ರಂದು ಅಂಗೀಕಾರವಾಗಿದ್ದ ಸಂವಿಧಾನವನ್ನು ಜನವರಿ 26 ರಂದೇ ಅಧಿಕೃತವಾಗಿ ಜಾರಿ ಮಾಡಲು ಐತಿಹಾಸಿಕ ಕಾರಣವಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ರಾಷ್ಟ್ರೀಯ ಕಾಂಗ್ರೆಸ್ 1930 ರಲ್ಲಿ ಘೋಷಿಸಿದ್ದ ಆ ಒಂದು ಮಹತ್ವದ ನಿರ್ಣಯವೇ ಜನವರಿ 26 ರಂದು ಗಣತಂತ್ರ ದಿನಾಚರಣೆಗೆ ಕಾರಣ. ಹಾಗಾದರೆ ಇಂದೇ ಯಾಕೆ ನಾವು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ ಎಂಬುದನ್ನು ತಿಳಿಯೋಣ.
ಐತಿಹಾಸಿಕ ಘೋಷಣೆಯ ದಿನವಿದು:ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಆಡಳಿತ ನಡೆಸುತ್ತಿದ್ದರು. ಬ್ರಿಟಿಷ್ ದಾಸ್ಯದ ಸಂಕೋಲೆಯಿಂದ ಹೊರಬರಲು ಆರಂಭವಾದ ಸ್ವಾತಂತ್ರ್ಯ ಹೋರಾಟದ ದಿನಗಳವು. 1930ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಕ್ಕೆ ಇನ್ನಷ್ಟು ಕಿಚ್ಚು ಹೊತ್ತಿಸಲು "ಪೂರ್ಣ ಸ್ವರಾಜ್" ಘೋಷಣೆ ಮೊಳಗಿಸಿತು. ಅಂದು ಜನವರಿ 26. ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ದಿನವದು. ಇದು ಸ್ವತಂತ್ರ್ಯ ಹೋರಾಟದ ಅಂತಿಮ ಹಂತವನ್ನು ತಲುಪಿಸಿತು. ಇಂತಹ ಮಹತ್ವಪೂರ್ಣ ದಿನವನ್ನೇ ನಾವಿಂದು ಗಣತಂತ್ರ ದಿನವಾಗಿ ಆಚರಿಸುತ್ತೇವೆ.
ಪೂರ್ಣ ಸ್ವರಾಜ್ ಘೋಷಣೆಯ ಹಿನ್ನೆಲೆ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1929 ರಲ್ಲಿ ಲಾಹೋರ್ ಅಧಿವೇಶನದಲ್ಲಿ ಸಮಾವೇಶಗೊಂಡಿತು. ಡಿಸೆಂಬರ್ 19 ರಂದು ಐತಿಹಾಸಿಕ "ಪೂರ್ಣ ಸ್ವರಾಜ್" ನಿರ್ಣಯವನ್ನು ಅಧಿವೇಶನದಲ್ಲಿ ಅಂಗೀಕರಿಸಲಾಯಿತು. "ಸಂಪೂರ್ಣ ಸ್ವ-ಆಡಳಿತ, ಸಾರ್ವಭೌಮತ್ವ" ಎಂಬುದಕ್ಕೆ ಅಕ್ಷರಶಃ ಅರ್ಥವನ್ನು ನೀಡುವ ನಿರ್ಣಯ ಅದಾಗಿತ್ತು. ಅಂದರೆ, "ಬ್ರಿಟಿಷ್ ಆಳ್ವಿಕೆ ಭಾರತೀಯರ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಲ್ಲದೇ, ಆರ್ಥಿಕವಾಗಿ, ರಾಜಕೀಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿ ಶೋಷಿಸಿದೆ. ಇದನ್ನು ಪೂರ್ಣವಾಗಿ ಇಲ್ಲವಾಗಿಸುವುದು. ದೇಶ ಬ್ರಿಟಿಷರ ದಾಸ್ಯದಿಂದ ಪೂರ್ಣವಾಗಿ ಹೊರಬಂದು ಸ್ವರಾಜ್ ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಬೇಕು ಎಂಬುದು ಘೋಷಣೆಯ ಷರಾ ಆಗಿತ್ತು.
ಈ ಸ್ವಾತಂತ್ರ್ಯದ ಘೋಷಣೆಯನ್ನು ಜನವರಿ 26, 1930 ರಂದು ಅಧಿಕೃತವಾಗಿ ಘೋಷಿಸಲಾಯಿತು. ಆ ದಿನದಂದು ಸ್ವಾತಂತ್ರ್ಯೋತವವನ್ನು ಆಚರಿಸಿ ಎಂದು ಭಾರತೀಯರಿಗೆ ರಾಷ್ಟ್ರೀಯ ಕಾಂಗ್ರೆಸ್ ಹೇಳಿತ್ತು. ಅಂದು ಕಾಂಗ್ರೆಸ್ ನಾಯಕರೆಲ್ಲರೂ ದೇಶದಾದ್ಯಂತ ದೇಶಭಕ್ತಿಗೀತೆಗಳೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದರು. ಪೂರ್ಣ ಸ್ವರಾಜ್ ದಿನವನ್ನು ಆಚರಿಸಿದ ಬಳಿಕ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ನಿರ್ಣಯವನ್ನೂ ಅಂಗೀಕರಿಸಲಾಯಿತು.
ಸಂಪೂರ್ಣ ಸ್ವರಾಜ್ ಘೋಷಣೆಯನ್ನು ಇತಿಹಾಸಕಾರ ಮಿಥಿ ಮುಖರ್ಜಿ ಅವರು ತಮ್ಮ ಶಾಡೋಸ್ ಆಫ್ ಎಂಪೈರ್ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ. ಸಂಪೂರ್ಣ ಸ್ವರಾಜ್ ಘೋಷಣೆ ಭಾರತದ ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಮೊಳೆಯಾಗಿದೆ. ಭಾರತದ ರಾಷ್ಟ್ರೀಯ ಚಳವಳಿಯು "ದಾನದ ಬದಲಿಗೆ ನ್ಯಾಯದ ಹೋರಾಟವಾಗಿ ಬದಲಾಯಿತು" ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಗಣರಾಜ್ಯೋತ್ಸವದ ಶುಭಾಶಯಗಳು ಭಾರತ!: ವಿಭಿನ್ನ ಕಲಾಕೃತಿ ಮೂಲಕ ಶುಭ ಕೋರಿದ ಗೂಗಲ್ ಡೂಡಲ್