ನವದೆಹಲಿ: ಬಹಳ ಕಾಲದಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸುವಂತೆ ಕೋರಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಶುಕ್ರವಾರ ಆರು ಗಂಟೆಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ದೆಹಲಿ ಮದ್ಯ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವ ಒಂದು ದಿನ ಮುಂಚೆ ಕವಿತಾ ಉಪವಾಸ ಸತ್ಯಾಗ್ರಹ ಮಾಡುತ್ತಿರುವುದು ಗಮನಾರ್ಹವಾಗಿದೆ. ಇಲ್ಲಿನ ಜಂತರ್ ಮಂತರ್ ನಲ್ಲಿ ನಡೆದ ಧರಣಿ ಕಾರ್ಯಕ್ರಮಕ್ಕೆ ಸಿಪಿಐ ಎಂ ನಾಯಕ ಸೀತಾರಾಂ ಯೆಚೂರಿ ಚಾಲನೆ ನೀಡಿದರು.
ಸತ್ಯಾಗ್ರಹ ಸ್ಥಳದಲ್ಲಿ ಸಮಾಜವಾದಿ ಪಕ್ಷದ ನಾಯಕಿ ಸೀಮಾ ಶುಕ್ಲಾ, ತೆಲಂಗಾಣ ಶಿಕ್ಷಣ ಸಚಿವೆ ಸವಿತಾ ಇಂದ್ರಾ ರೆಡ್ಡಿ ಮತ್ತು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಥೋಡ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಸಂಜಯ್ ಸಿಂಗ್ ಮತ್ತು ಚಿತ್ರಾ ಸರ್ವರಾ (ಎಎಪಿ), ನರೇಶ್ ಗುಜ್ರಾಲ್ (ಅಕಾಲಿದಳ), ಅಂಜುಮ್ ಜಾವೇದ್ ಮಿರ್ಜಾ (ಪಿಡಿಪಿ), ಶಮಿ ಫಿರ್ದೌಸ್ (ಎನ್‌ಸಿ), ಸುಶ್ಮಿತಾ ದೇವ್ (ಟಿಎಂಸಿ), ಕೆಸಿ ತ್ಯಾಗಿ (ಜೆಡಿಯು), ಸೀಮಾ ಮಲಿಕ್ (ಎನ್‌ಸಿಪಿ), ನಾರಾಯಣ ಕೆ (ಸಿಪಿಐ), ಶ್ಯಾಮ್ ರಜಾಕ್ (ಆರ್‌ಎಲ್‌ಡಿ), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ) ಮತ್ತು ಕಾಂಗ್ರೆಸ್‌ನ ಮಾಜಿ ನಾಯಕ ಕಪಿಲ್ ಸಿಬಲ್ ಕೂಡ ಸತ್ಯಾಗ್ರಹದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಮಸೂದೆ ಅಂಗೀಕಾರವಾಗುವವರೆಗೆ ಈ ಪ್ರತಿಭಟನೆಯಲ್ಲಿ ಕವಿತಾ ಅವರಿಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ, ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲು ಈ ಮಸೂದೆಯನ್ನು ತರುವುದು ಮುಖ್ಯವಾಗಿದೆ ಎಂದು ಯೆಚೂರಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಭಾರತ ಅಭಿವೃದ್ಧಿಯಾಗಬೇಕಾದರೆ ಮಹಿಳೆಯರು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಅದಕ್ಕಾಗಿ ಕಳೆದ 27 ವರ್ಷಗಳಿಂದ ಬಾಕಿ ಇರುವ ಈ ಮಸೂದೆ ಜಾರಿಗೊಳಿಸುವುದು ಮುಖ್ಯವಾಗಿದೆ ಎಂದು ಕವಿತಾ ಹೇಳಿದರು.