ಅಮರಾವತಿ: (ಆಂಧ್ರಪ್ರದೇಶ): ಮುಂದಿನ 24 ಗಂಟೆಗಳಲ್ಲಿ ಅಂದರೆ ಡಿಸೆಂಬರ್ 4ರಂದು ಜವಾದ್ ಚಂಡಮಾರುತ ಆಂಧ್ರಪ್ರದೇಶ ಮತ್ತು ಒಡಿಶಾಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.
cyclone Jawad alert:ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ತೀವ್ರ ವಾಯುಭಾರ ಕುಸಿತದಿಂದ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವಾಗಿ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಚಂಡಮಾರುತವು ಡಿಸೆಂಬರ್ 4 ರ(ನಾಳೆ) ಬೆಳಗ್ಗೆ ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾದ ಕರಾವಳಿ ದಾಟಿ, ಪಶ್ಚಿಮ ಬಂಗಾಳಕ್ಕೆ ಮುಂದುವರಿಯುವ ನಿರೀಕ್ಷೆಯಿದೆ.
ಹವಾಮಾನ ಇಲಾಖೆಯು ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಇಂದು ನೀಡಿದೆ. ಆಂಧ್ರಪ್ರದೇಶದ ಉತ್ತರ ಭಾಗದ ಹಲವೆಡೆ ಸಾಧಾರಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಆಂಧ್ರಪ್ರದೇಶದ ಬಹುತೇಕ ಭಾಗಗಳಲ್ಲಿ ಶನಿವಾರ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಶುಕ್ರವಾರ ಮಧ್ಯರಾತ್ರಿಯಿಂದ ಕರಾವಳಿಯಲ್ಲಿ ಗಂಟೆಗೆ 45-65 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ.
ನಾಳೆ ಬೆಳಗ್ಗೆಯಿಂದ ಗಂಟೆಗೆ 70-90 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಸೋಮವಾರದವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ವಿಪತ್ತು ನಿರ್ವಹಣಾ ಆಯುಕ್ತ ಕೆ.ಕನ್ನಬಾಬು ಎಚ್ಚರಿಕೆ ನೀಡಿದ್ದಾರೆ. ಅತಿವೃಷ್ಟಿ ಹಿನ್ನೆಲೆಯಲ್ಲಿ ಒಳನಾಡಿನ ಜನರು ಜಾಗೃತರಾಗುವಂತೆ ಸಲಹೆ ನೀಡಿದ್ದಾರೆ. ರೈತರು ಕೃಷಿ ಕೆಲಸಗಳಲ್ಲಿ ತೊಡಗುವಾಗ ಸೂಕ್ತ ಕಾಳಜಿ ವಹಿಸಬೇಕು ಎಂದು ತಿಳಿಸಿದ್ದಾರೆ.