ಸೂರತ್ (ಗುಜರಾತ್):ಅರಬ್ಬೀ ಸಮುದ್ರದಲ್ಲಿ ರೌದ್ರಾವತಾರ ತಾಳುತ್ತಿರುವ 'ಬಿಫೋರ್‌ಜೋಯ್' ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಇದು ಉತ್ತರ ಮತ್ತು ಈಶಾನ್ಯ ಭಾಗಗಳಿಗೆ ತಟ್ಟಲಿದೆ. ಹೀಗಾಗಿ ಈ ಭಾಗದ ಜನರು ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಶನಿವಾರ ಮತ್ತು ಭಾನುವಾರ ಚಂಡಮಾರುತ ಉತ್ತರ ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿಗೆ ತೀವ್ರ ಸ್ವರೂಪದಲ್ಲಿ ಬಂದಪ್ಪಳಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ತಿಥಾಲ್ ಬೀಚ್ ಬಂದ್:ಬಿಫೋರ್‌ಜೋಯ್ ತೀವ್ರತೆ ಪಡೆದುಕೊಂಡ ಕಾರಣ ಗುಜರಾತ್‌ನ ವಲ್ಸಾದ್ ಪಕ್ಕದಲ್ಲಿರುವ ಅರಬ್ಬಿ ಸಮುದ್ರದ ಕರಾವಳಿಗೆ ಅಪ್ಪಳಿಸಲಿದೆ. ಹೀಗಾಗಿ ತಿಥಾಲ್ ಬೀಚ್ ಅನ್ನು ಜೂನ್ 14 ರವರೆಗೆ ಬಂದ್ ಮಾಡಲಾಗಿದ್ದು, ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಕೂಡದು ಅಥವಾ ಈಗಾಗಲೇ ಸಮುದ್ರದಲ್ಲಿ ಇರುವವರು ತಕ್ಷಣವೇ ಹೊರಬರುವಂತೆ ಸೂಚಿಸಲಾಗಿದೆ ಎಂದು ವಲ್ಸಾದ್‌ನ ತಹಸೀಲ್ದಾರ್ ಟಿಸಿ ಪಟೇಲ್ ತಿಳಿಸಿದ್ದಾರೆ.
ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದವರನ್ನೂ ವಾಪಸ್ ಕರೆಸಿಕೊಳ್ಳಲಾಗಿದೆ. ಅಗತ್ಯವಿದ್ದರೆ ಸಮುದ್ರ ತೀರದಲ್ಲಿರುವ ಗ್ರಾಮಗಳಿಂದ ಜನರನ್ನು ಸ್ಥಳಾಂತರಿಸಲಾಗುವುದು. ಅವರಿಗಾಗಿ ಆಶ್ರಯ ಮನೆಗಳನ್ನು ಮಾಡಲಾಗಿದೆ. ಜೂನ್ 14 ರವರೆಗೆ ಪ್ರವಾಸಿಗರಿಗೆ ತಿಥಾಲ್ ಬೀಚ್ ಅನ್ನು ಮುಚ್ಚಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಮುಂಬೈನಲ್ಲಿ ಮಳೆ:ಚಂಡಮಾರುತದ ಪ್ರಭಾವ ಮಹಾರಾಷ್ಟ್ರಕ್ಕೂ ತಗುಲಲಿದ್ದು, ಮುಂದಿನ 48 ಗಂಟೆಗಳಲ್ಲಿ ಮುಂಬೈ ಮತ್ತು ಅದರ ನೆರೆಯ ಜಿಲ್ಲೆಗಳಾದ ಥಾಣೆ ಮತ್ತು ಪಾಲ್ಘರ್ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಫೋರ್‌ಜೋಯ್ ಚಂಡಮಾರುತದ ಪ್ರಭಾವದಿಂದ ಮಳೆಯಾಗಲಿದೆ.