ನವದೆಹಲಿ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಖಿಲ ಭಾರತ ಇಮಾಮ್ ಸಂಘಟನೆಯ ಅಧ್ಯಕ್ಷರನ್ನು ಭೇಟಿಯಾಗಿರುವುದು ಪಕ್ಷದ ಭಾರತ್ ಜೋಡೋ ಯಾತ್ರೆಯ ಪರಿಣಾಮವಾಗಿದೆ ಎಂದು ಕಾಂಗ್ರೆಸ್ ಮುಖಂಡ ಗೌರವ್ ವಲ್ಲಭ್ ಪ್ರತಿಪಾದಿಸಿದ್ದಾರೆ. ದೇಶವನ್ನು ಒಗ್ಗೂಡಿಸಲು ಆರ್ಎಸ್ಎಸ್ ಮುಖ್ಯಸ್ಥರು ರಾಹುಲ್ ಗಾಂಧಿ ಅವರೊಂದಿಗೆ ಕೈಜೋಡಿಸಲಿ ಎಂದು ಹೇಳಿದರು.
ಮುಸ್ಲಿಂ ಸಮುದಾಯದೊಂದಿಗೆ ಸೌಹಾರ್ದ ಸಂಬಂಧವನ್ನು ಏರ್ಪಡಿಸುವ ನಿಟ್ಟಿನಲ್ಲಿ ಆರ್ಎಸ್ಎಸ್ ಮುಖ್ಯಸ್ಥರು ಗುರುವಾರ ದೆಹಲಿಯ ಮಸೀದಿ ಮತ್ತು ಮದರಸಾಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದರು. ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಆರ್ಎಸ್ಎಸ್ ಮುಖ್ಯಸ್ಥರನ್ನು "ರಾಷ್ಟ್ರಪಿತ" ಎಂದು ಕರೆದಿದ್ದು ಗಮನಾರ್ಹ.
ಭಾರತ್ ಜೋಡೋ ಯಾತ್ರೆ ಆರಂಭವಾಗಿ ಕೇವಲ 15 ದಿನಗಳು ಕಳೆದಿವೆ. ಆದರೆ, ಅಷ್ಟರಲ್ಲಾಗಲೇ ಅದರ ಪರಿಣಾಮಗಳು ಕಾಣತೊಡಗಿವೆ. ಟಿವಿ ಚಾನೆಲ್ ಒಂದರಲ್ಲಿ ಮಾತನಾಡಿದ ಬಿಜೆಪಿ ವಕ್ತಾರರೊಬ್ಬರು ಗೋಡ್ಸೆ ಮುರ್ದಾಬಾದ್ ಎಂದಿದ್ದರು. ಈಗ ಮೋಹನ್ ಭಾಗವತ್ ಮತ್ತೊಂದು ಧರ್ಮದ ವ್ಯಕ್ತಿಯ ಮನೆಗೆ ಹೋಗಿದ್ದಾರೆ. ಇದು ಭಾರತ್ ಜೋಡೋ ಯಾತ್ರೆಯ ಪರಿಣಾಮವೇ ಆಗಿದೆ ಎಂದು ಗೌರವ್ ವಲ್ಲಭ್ ಹೇಳಿದ್ದಾರೆ.