ಡೆಹ್ರಾಡೂನ್:ಐಎಂಎ ಹಾಗೂ ಬಾಬಾ ರಾಮದೇವ್ ನಡುವಿನ ವಿವಾದವು ತಾರಕಕ್ಕೇರಿದೆ. ಈಗಾಗಲೇ ಭಾರತೀಯ ವೈದ್ಯಕೀಯ ಸಂಘಕ್ಕೆ ರಾಮ್ದೇವ್ 25 ಪ್ರಶ್ನೆಗಳೊಂದಿಗೆ ಸವಾಲ್ ಹಾಕಿದ್ದಾರೆ. ಈ ಬೆನ್ನಲ್ಲೇ ಐಎಂಎ ಕೂಡ ರಾಮದೇವ್ಗೆ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಬಹಿರಂಗ ಚರ್ಚೆಗೆ ಆಹ್ವಾನಿಸಿದೆ.
ತಾರಕಕ್ಕೇರಿದ ಐಎಂಎ ಹಾಗೂ ಬಾಬಾ ರಾಮ್ದೇವ್ ವಿವಾದ ಮುಕ್ತ ಚರ್ಚೆಗೆ ಬನ್ನಿ
ಉತ್ತರಾಖಂಡದ ಐಎಂಎ ಕಾರ್ಯದರ್ಶಿ ಡಾ.ಅಜಯ್ ಖನ್ನಾ, ಬಾಬಾ ರಾಮದೇವ್ಗೆ ಪತ್ರ ಬರೆದಿದ್ದು, ಬಾಬಾ ಮತ್ತು ಅವರ ತಂಡದ ಸದಸ್ಯರಾದ ಆಚಾರ್ಯ ಬಾಲಕೃಷ್ಣ ನಮ್ಮೊಂದಿಗೆ ಮುಕ್ತ ಚರ್ಚೆಗೆ ಬರಬೇಕೆಂದು ಆಹ್ವಾನಿಸಿದ್ದಾರೆ. ಈ ಚರ್ಚೆಯಲ್ಲಿ, ನೀವು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತೇವೆ. ಅದೇ ಸಮಯದಲ್ಲಿ, ನಮ್ಮ ವೈದ್ಯರ ಪ್ರಶ್ನೆಗಳಿಗೆ ಬಾಬಾ ಉತ್ತರಿಸಬೇಕಿದೆ. ಚರ್ಚೆಯ ದಿನಾಂಕ ಮತ್ತು ಸ್ಥಳವನ್ನು ನೀವೇ ನಿರ್ಧರಿಸಿ ಎಂದು ಉಲ್ಲೇಖಿಸಿದ್ದಾರೆ.
‘ರಾಮ ದೇವ್ ಗುಣಪಡಿಸಿದ ರೋಗಿಗಳ ಪಟ್ಟಿ ನೀಡಿ’
ಆಚಾರ್ಯ ಬಾಲಕೃಷ್ಣ ಅವರು ತಮ್ಮ ಅರ್ಹತೆಯ ಬಗ್ಗೆ ಸರ್ಕಾರಕ್ಕೆ ಈವರೆಗೆ ಮಾಹಿತಿ ನೀಡಿಲ್ಲ ಯಾಕೆ ಎಂದು ಬಾಬಾ ರಾಮದೇವ್ ಅವರನ್ನು ಪ್ರಶ್ನಿಸಲಾಗಿದೆ. ಅಲೋಪತಿ ಆಸ್ಪತ್ರೆಯಲ್ಲಿ ಬಾಬಾ ತಯಾರಿಸಿದ ಉತ್ಪನ್ನವನ್ನು ಬಳಸಿದ್ದಾರೆ ಎನ್ನಲಾಗ್ತಿದೆ. ಆ ಆಸ್ಪತ್ರೆಗಳು ಯಾವುವು ಎಂಬ ಪಟ್ಟಿಯನ್ನು ನಮಗೆ ಕಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೆಚ್ಚುತ್ತಿರುವ ವಿವಾದ..!
ಕೊರೊನಾ ಎರಡನೇ ಅಲೆಗೆ ಜನತೆ ತತ್ತರಿಸಿ ಹೋಗುತ್ತಿರುವ ಈ ಸಮಯದಲ್ಲಿ ಬಾಬಾ ರಾಮದೇವ್ ಹಾಗೂ ಐಎಂಎ ನಡುವಿನ ವ್ಯಾಜ್ಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಲೋಪತಿಯನ್ನು ಬಾಬಾ ಸ್ಟುಪಿಡ್ ಸೈನ್ಸ್ ಎಂದು ಕರೆದು, ವೈದ್ಯರಿಗೆ 25 ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಬಾಬಾಗೆ ಐಎಂಎ ಹಲವಾರು ಸವಾಲುಗಳನ್ನು ಹಾಕಿದೆ.
ಅಲೋಪತಿ ಬಗ್ಗೆ ಬಾಬಾಗೆ ಏನ್ಗೊತ್ತು?
ಐಎಂಎ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಕೇಂದ್ರ ಸಮಿತಿಯ ಸದಸ್ಯ ಡಾ.ಡಿ.ಡಿ. ಚೌಧರಿ ಅವರು ಬಾಬಾ ರಾಮದೇವ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಬಾಬಾ ರಾಮದೇವ್ ಅವರಿಗೆ ಅಲೋಪಥಿಗಳ ಬಗ್ಗೆ ಕಿಂಚಿತ್ತೂ ತಿಳಿದಿಲ್ಲ. ಆದ್ದರಿಂದ, ವ್ಯಾಕ್ಸಿನೇಷನ್ ನಂತರವೂ ವೈದ್ಯರು ಸಾಯುತ್ತಿರುವ ವಿಧಾನದ ಬಗ್ಗೆ ಅವರು ಮಾತನಾಡುತ್ತಿದ್ದಾರಷ್ಟೇ ಎಂದು ಖಾರವಾಗಿ ನುಡಿದಿದ್ದಾರೆ.. ವ್ಯಾಕ್ಸಿನೇಷನ್‌ನಿಂದ ಯಾವುದೇ ಸಾವು ಸಂಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
‘ರಾಮದೇವ್ಗೆ ಜ್ಞಾನದ ಕೊರತೆ’
8 ನೇ ತರಗತಿ ಓದಿರುವ ಬಾಬಾ ರಾಮದೇವ್ಗೆ ಯಾವುದೇ ಜ್ಞಾನವಿಲ್ಲ. ಹೀಗಾಗಿ ಅವರ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ. ಕೊರೊನಾ ಕಾಲದಲ್ಲಿ ಅಲೋಪತಿ ವೈದ್ಯರು ತಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ವೈದ್ಯ ಡಿ.ಡಿ. ಚೌಧರಿ ಹೇಳಿದ್ದಾರೆ.
ಎಲ್ಲರೂ ಲಸಿಕೆ ಪಡೆಯಿರಿ
ಕೊರೊನಾ ಈಗಲೂ ಇದೆ, ಮುಂದೆಯೂ ಇರುತ್ತದೆ. ಹಾಗಾಗಿ ಎಲ್ಲರೂ ಅದರ ವಿರುದ್ಧ ಹೋರಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಎಲ್ಲರೂ ತಪ್ಪದೆ ವ್ಯಾಕ್ಸಿನ್ ಪಡೆಯಿರಿ ಎಂದು ಐಎಂಎ ಮನವಿ ಮಾಡಿದೆ.