ನವದೆಹಲಿ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಕ್ರಮಗಳು ಮತ್ತು ಹೊಸ ನೀತಿಗಳನ್ನು ವಿರೋಧಿಸಿ ಇಂದು ಸುಮಾರು 2 ಲಕ್ಷ ವೈದ್ಯರು ಬೀದಿಗಿಳಿದು ಮೌನ ಪ್ರತಿಭಟನೆ ನಡೆಸಲಿದ್ದಾರೆ.
ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಹೊರಡಿಸಿರುವ ಅಧಿಸೂಚನೆಗೆ ಆಕ್ರೋಶ ವ್ಯಕ್ತಪಡಿಸಿರುವ ಅಲೋಪಥಿ ವೈದ್ಯರು ಒಪಿಡಿ ಬಂದ್ ಮಾಡಿ, ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ವೈದ್ಯಕೀಯ ಕಾಲೇಜುಗಳು, ಸರ್ಕಾರಿ ವೈದ್ಯಕೀಯ ಸೇವೆ ವಿಭಾಗ, ಸಾಮಾನ್ಯ ವೈದ್ಯರು, ತಜ್ಞರು, ಸರ್ಜನ್ಗಳು, ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ತಲಾ 20 ಡಾಕ್ಟರ್ಸ್ಗಳನ್ನು ಗುಂಪಾಗಿ ವಿಂಗಡಿಸಿ ದೇಶಾದ್ಯಂತ 10,000 ಸ್ಥಳಗಳಲ್ಲಿ ಮಧ್ಯಾಹ್ನ 12 ರಿಂದ ಮಧ್ಯಾಹ್ನ 2 ಗಂಟೆವರೆಗೆ ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ವೈದ್ಯರು ಮೌನ ಪ್ರತಿಭಟನೆ ನಡೆಸಲಿದ್ದು, ಶಾಂತಿಯುತ ಮತ್ತು ಕೋವಿಡ್ ಮಾನದಂಡಗಳು ಉಲ್ಲಂಘನೆಯಾಗದಂತೆ ಪ್ರತಿಭಟಿಸುವುದಾಗಿ ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅಲೋಪಥಿ ವೈದ್ಯರು ಗರಂ: ಒಪಿಡಿ ಬಂದ್ಗೆ ನಿರ್ಧಾರ
ಇಂದಿನ ಪ್ರತಿಭಟನೆ ಬಳಿಕ ಪುನಃ ಡಿಸೆಂಬರ್ 11 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ತುರ್ತು ಇಲ್ಲದ ಸೇವೆಗಳನ್ನು ಹಿಂತೆಗೆದುಕೊಳ್ಳಲಾಗುವುದು. ಆದರೆ ಕೋವಿಡ್ ಚಿಕಿತ್ಸೆ ಹಾಗೂ ತುರ್ತು ಚಿಕಿತ್ಸೆ ಸೇವೆ ಇರಲಿದ್ದು, ಅದಕ್ಕೆ ಸಂಬಂಧಪಟ್ಟ ವೈದ್ಯರು ಮಾತ್ರ ಕರ್ತವ್ಯದಲ್ಲಿ ಇರಲಿದ್ದಾರೆ ಎಂದು ಐಎಂಎ ಹೇಳಿದೆ. ಅಪಘಾತ, ಎಮೆರ್ಜೆನ್ಸಿ ಕೇಸ್ ,ಐಸಿಯುಗಳು, ಕೋವಿಡ್ ಪ್ರಕರಣ, ತುರ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ ಎಲ್ಲಾ ತುರ್ತು ಸೇವೆಗಳು ಮುಂದುವರಿಯುತ್ತವೆ. ಒಪಿಡಿ ಸೇವೆಗಳು ಮಾತ್ರ ಲಭ್ಯವಿರುವುದಿಲ್ಲ ಮತ್ತು ಈಗಾಗಲೇ ನಿಗದಿಯಾಗಿರುವ ಶಸ್ತ್ರಚಿಕಿತ್ಸೆಯನ್ನು ಮುಂದೂಡುವುದಿಲ್ಲ ಅಂತಾ ಐಎಂಎ ಸ್ಪಷ್ಟಪಡಿಸಿದೆ.
ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರ್ಥೊಪೆಡಿಕ್, ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಮತ್ತು ಕಾರ್ಯವಿಧಾನಗಳನ್ನು ನಿರ್ವಹಿಸಲು ಔಪಚಾರಿಕ ತರಬೇತಿ ಪಡೆಯಲು ಅವಕಾಶ ಆಪ್ತಮೊಲೊಜಿ, ಇಎನ್‌ಟಿ ಮತ್ತು ದಂತ ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚಿನ ಕ್ರಮವನ್ನು ಒಳಗೊಂಡಂತೆ ಕೇಂದ್ರವು ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಅಭಿಯಾನವನ್ನು ಮುನ್ನಡೆಸುತ್ತಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಡಿಯಲ್ಲಿ ಪ್ರತಿಭಟನೆ ನಡೆಯಲಿದೆ.