ಕೊಚ್ಚಿ :ಕೇರಳ ಪ್ರವಾಹ ಪರಿಹಾರದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ವಿಜಯನ್ ಅವರಿಗಾದ ಹಿನ್ನಡೆ ಎಂದು ಹೇಳಲಾಗುತ್ತಿದೆ. ಮಂಗಳವಾರ ರಾತ್ರಿ ಶಿವಶಂಕರ್ ಅವರನ್ನು ಬಂಧಿಸಲಾಗಿದ್ದು, ನಂತರ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಇಡಿ ಅವರನ್ನು ತನ್ನ ಕಸ್ಟಡಿಗೆ ಕೋರುವ ನಿರೀಕ್ಷೆಯಿದೆ. ಶಿವಶಂಕರ್ ಜನವರಿ 31 ರಂದು ಸೇವೆಯಿಂದ ನಿವೃತ್ತರಾಗಿದ್ದರು.
ಸೋಮವಾರದಿಂದ ನಡೆದಿದ್ದ ಎರಡು ದಿನಗಳ ತೀವ್ರ ವಿಚಾರಣೆಯ ನಂತರ ಶಿವಶಂಕರ್ ಅವರನ್ನು ಬಂಧಿಸಲಾಗಿದೆ. ವಿಜಯನ್ ಅವರ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ 'ಲೈಫ್ ಮಿಷನ್'ನಲ್ಲಿ ಗುತ್ತಿಗೆ ಪಡೆಯಲು ನಾಲ್ಕು ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಕಮಿಷನ್ ರೂಪದಲ್ಲಿ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದರ ತನಿಖೆಯ ಭಾಗವಾಗಿ ಅವರನ್ನು ಬಂಧಿಸಲಾಗಿದೆ. ಕಮಿಷನ್ ಪಾವತಿ ವಿಚಾರವನ್ನು ಬಿಲ್ಡರ್ ಸಂತೋಷ್ ಈಪೆನ್ ಎಂಬುವರು ಸಿಬಿಐ ಮುಂದೆ ಒಪ್ಪಿಕೊಂಡಿದ್ದರಿಂದ ಶಿವಶಂಕರ್ ಬಂಧನವಾಗಿದೆ.
2016-21ರ ಅವಧಿಯ ಮೊದಲ ಬಾರಿಯ ವಿಜಯನ್ ಸರ್ಕಾರದ ಅವಧಿಯಲ್ಲಿ ಸಿಎಂ ನಿಕಟವಾಗಿ ತೊಡಗಿಸಿಕೊಂಡಿರುವ ಎಲ್ಲಾ ವಿಷಯಗಳಲ್ಲಿ ಶಿವಶಂಕರ್ ಅವರ ನಿರ್ಣಯವೇ ಅಂತಿಮವಾಗಿರುತ್ತಿತ್ತು. ಆದರೆ ಈ ಪ್ರಕರಣದಲ್ಲಿ ವಿದೇಶಿ ಕೊಡುಗೆ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಯೋಜನೆಯು 2018 ರ ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಬಡವರಿಗೆ ಸೂರು ಒದಗಿಸುವ ಉದ್ದೇಶ ಹೊಂದಿದೆ. ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿ ನಡೆಯುತ್ತಿದ್ದ ಈ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಆಗಿನ ಕಾಂಗ್ರೆಸ್ ಶಾಸಕ ಅನಿಲ್ ಅಕ್ಕರಾ ಅವರು ಸಿಬಿಐಗೆ ದೂರು ನೀಡಿದ ನಂತರ ಯೋಜನೆ ಸ್ಥಗಿತವಾಗಿತ್ತು.