ಹೈದರಾಬಾದ್:ಮಾನಸಿಕ ಖಿನ್ನತೆ ಹಾಗೂ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಕರು ಇಳಿಮುಖವಾದ್ದರಿಂದ ಮನನೊಂದು ಐಐಟಿ ವಿದ್ಯಾರ್ಥಿಯೋರ್ವ ವಸತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕ್ರಾಂತಿನಗರದಲ್ಲಿ ಗುರುವಾರ ನಡೆದಿದೆ. ಗ್ವಾಲಿಯರ್ ಐಐಟಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ದಿನಾ(24) ಎಂಬಾತನೆ ಪ್ರಾಣ ಕಳೆದುಕೊಂಡ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.
ಯುವಕನ ತಂದೆ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಡಿಆರ್ಡಿಒದಲ್ಲಿ ವಿಜ್ಞಾನಿಯಾಗಿದ್ದಾರೆ. ದಿನಾ ಸೆಲ್ಫ್ಲೋ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ವಿಡಿಯೋ ಗೇಮ್ ಬಗ್ಗೆ ಮಾಹಿತಿ ಒಳಗೊಂಡ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ಆದರೆ ಯುವಕ ಬಾಲ್ಯದಿಂದಲೂ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ವಸತಿ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೂ ಮುನ್ನ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ವಿದ್ಯಾರ್ಥಿ, ಆತ್ಮಹತ್ಯೆ ಹಿಂದಿನ ಕಾರಣಗಳನ್ನು ತಿಳಿಸಿದ್ದಾನೆ. ಅದರಲ್ಲಿ ಸೂಸೈಡ್ ನೋಟ್ ಕೂಡ ಇದ್ದು, ಬಾಲ್ಯದಿಂದಲೂ ತಾನು ಹಲವು ಕಷ್ಟಗಳನ್ನು ಎದುರಿಸಿದ್ದೇನೆ. ನೆಮ್ಮದಿ ಇಲ್ಲದ ಜೀವನ ನಡೆಸಿದ್ದೇನೆ, ತಂದೆ-ತಾಯಿ ತನಗೆ ಸದಾ ಗದರಿಸುತ್ತಿದ್ದರು, ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. ಎಲ್ಲರೂ ತನ್ನನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದು, ತನಗೆ ಯಾರೂ ನೆರವಾಗಿಲ್ಲ ಎಂದು ಬರೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.