ನವದೆಹಲಿ : ಪಂಡಿತ್ ದೀನಾದಯಾಳ್ ಉಪಾಧ್ಯಾಯ ಟೆಲಿಕಾಂ ಸ್ಕಿಲ್ ಎಕ್ಸಲೆನ್ಸ್ 2018 ಗೌರವಕ್ಕೆ ಐಐಟಿ ದೆಹಲಿ ಪ್ರೊಫೆಸರ್ ಡಾ.ಸುಬ್ರತಾ ಕರ್ ಆಯ್ಕೆಯಾಗಿದ್ದಾರೆ.
ಈ ಸಂಬಂಧ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಡಾ.ಸುಬ್ರತಾ ಕರ್ ಅವರಿಗೆ ಬಹುಮಾನ ಮತ್ತು 30 ಸಾವಿರ ರೂ. ನಗದು ನೀಡಿ ಗೌರವಿಸಿದರು. ರೈಲುಗಳಿಗೆ ಜಾನುವಾರುಗಳು ಡಿಕ್ಕಿ ಹೊಡೆಯುವುದನ್ನು ತಡೆದು ವನ್ಯಜೀವಿಗಳ ಸಂರಕ್ಷಣೆ ಮಾಡುವ ಸಲುವಾಗಿ ಪ್ರೊಫೆಸರ್ ಅವರು ಹೊಸ ತಂತ್ರಜ್ಞಾನವನ್ನು ಆವರಿಷ್ಕರಿಸಿದ್ದು, ಸಂವೇದಕ ಜಾಲ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದಾರೆ. ಅವರ ಈ ಸಾಧನೆ ಕಂಡು ಈ ಗೌರವವನ್ನು ನೀಡಲಾಗಿದೆ.
ವನ್ಯಜೀವಿ ಸಂರಕ್ಷಣೆಗೆ ಸಹಾಯ :ಇತ್ತಿಚಿನ ದಿನಗಳಲ್ಲಿ ಪ್ರಾಣಿಗಳು ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಬೇಕೆಂದು ನಿರ್ಧರಿಸಿದ ಡಾ.ಸುಬ್ರತಾ ಕರ್ ಅವರು ಸಂವೇದಕ ನೆಟ್‌ವರ್ಕ್ ವ್ಯವಸ್ಥೆ ಸಿದ್ಧಪಡಿಸಿದ್ದಾರೆ. ಇದನ್ನು ವನ್ಯಜೀವಿಗಳ ಚಲನೆಗೆ ಅಡ್ಡಿಯಾಗದ ರೀತಿ ವಿನ್ಯಾಸಗೊಳಿಸಲಾಗಿದೆ. ಇದು ರೈಲು ಮತ್ತು ಪ್ರಾಣಿಗಳ ಘರ್ಷಣೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಉತ್ತರಾಖಂಡದ ರಾಜಾಜಿ ಉದ್ಯಾನದಲ್ಲಿ ಸಂವೇದಕ ಅಳವಡಿಕೆ :ಉತ್ತರಾಖಂಡದ ರಾಜಾಜಿ ರಾಷ್ಟ್ರೀಯ ಉದ್ಯಾನದಲ್ಲಿ ಡಾ.ಸುಬ್ರತಾ ಕರ್ ಅವರು ರಚಿಸಿರುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇಲ್ಲಿ ಆನೆಗಳು ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದವು. ಈ ಸಂಬಂಧ ಪ್ರಾಯೋಗಿಕವಾಗಿ ನೋಡಲು ಡಾ.ಸುಬ್ರತಾ ಕರ್ ಸಿದ್ಧಪಡಿಸಿದ ಸಂವೇದಕ ನೆಟ್‌ವರ್ಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.