ಚೆನ್ನೈ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ವಿದ್ಯಾರ್ಥಿಗಳು ಇಂದು (28 ನವೆಂಬರ್ 2022) ತಮ್ಮ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸ್ಥೆ ತಯಾರಿಸಿರುವ ಮೊದಲ ಎಲೆಕ್ಟ್ರಿಕ್ ಫಾರ್ಮುಲಾ ರೇಸಿಂಗ್ ಕಾರು ಬಿಡುಗಡೆ ಮಾಡಿದರು.
'ರಾಫ್ತಾರ್' ವಿದ್ಯಾರ್ಥಿಗಳ ತಂಡ ನಿರ್ಮಿಸಿದ ಫಾರ್ಮುಲಾ ಕಾರ್ 'RF23' ಒಂದು ವರ್ಷದ ಅವಧಿಯ ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಈ ಹಿಂದಿನ ಆಂತರಿಕ ದಹನಕಾರಿ ಇಂಜಿನ್ ಮಾದರಿಗೆ ಹೋಲಿಸಿದರೆ ವೇಗ ಮತ್ತು ಲ್ಯಾಪ್ ಸಮಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ವಿದ್ಯಾರ್ಥಿಗಳು ನಿರೀಕ್ಷಿಸಿದ್ದಾರೆ.
ಟೀಮ್ ರಾಫ್ತಾರ್ ವಿಶ್ವದ ಅತ್ಯುತ್ತಮ ಫಾರ್ಮುಲಾ ವಿದ್ಯಾರ್ಥಿಗಳ ತಂಡವಾಗುವ ಗುರಿ ಹೊಂದಿದೆ. ಭಾರತದಲ್ಲಿ ನಿರಂತರ ನಾವೀನ್ಯತೆ ಮತ್ತು ಸುಸ್ಥಿರ ತಾಂತ್ರಿಕ ಪ್ರಗತಿಯೊಂದಿಗೆ ಫಾರ್ಮುಲಾ ವಿದ್ಯಾರ್ಥಿ ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ಫಾರ್ಮುಲಾ ವಿದ್ಯಾರ್ಥಿ ತಂಡವಾಗಿ ರಾಫ್ತಾರ್ ಪ್ರಪಂಚದಾದ್ಯಂತ ಉನ್ನತ ಎಂಜಿನಿಯರಿಂಗ್ ಸಂಸ್ಥೆಗಳೆದುರು ಫಾರ್ಮುಲಾ ವಿದ್ಯಾರ್ಥಿ ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಪ್ರತಿ ವರ್ಷ ಉನ್ನತ-ಕಾರ್ಯಕ್ಷಮತೆಯ ರೇಸ್ ಕಾರನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ರೇಸಿಂಗ್ ಮಾಡಲು ಪರಿಣತಿಯನ್ನು ಪಡೆದಿದೆ.
ನೈಜ-ಪ್ರಪಂಚದ ತಾಂತ್ರಿಕ ಪರಿಣತಿ: ಟೀಮ್ ರಾಫ್ತಾರ್ ವಿವಿಧ ವಿಭಾಗಗಳಿಂದ 45 ವಿದ್ಯಾರ್ಥಿಗಳನ್ನು ಒಳಗೊಂಡಿದೆ ಮತ್ತು ಐಐಟಿ ಮದ್ರಾಸ್‌ನಲ್ಲಿರುವ ಸೆಂಟರ್ ಫಾರ್ ಇನ್ನೋವೇಶನ್ (ಸಿಎಫ್‌ಐ) ಸ್ಪರ್ಧಾತ್ಮಕ ತಂಡಗಳಲ್ಲಿ ಒಂದಾಗಿದೆ. ತಂಡವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲು ಎದುರುನೋಡುತ್ತಿದೆ. ಉದ್ಯಮ-ಪ್ರಮಾಣಿತ ಎಂಜಿನಿಯರಿಂಗ್ ಅಭ್ಯಾಸಗಳನ್ನು ಉತ್ತೇಜಿಸುತ್ತದೆ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ನೈಜ-ಪ್ರಪಂಚದ ತಾಂತ್ರಿಕ ಪರಿಣತಿಯನ್ನು ಪೋಷಿಸುತ್ತದೆ.