ಚೆನ್ನೈ:ಐಐಟಿ ಮದ್ರಾಸ್ನಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಅಲ್ಲಿನ ಸಹಾಯಕ ಪ್ರಾಧ್ಯಾಪಕರೊಬ್ಬರು ತಮ್ಮ ಹುದ್ದೆಯನ್ನು ತೊರೆದಿದ್ದಾರೆ. ಅರ್ಥಶಾಸ್ತ್ರದ ವಿಭಾಗದ ಸಹಾಯಕ ಪ್ರಾಧ್ಯಾಪಕರು ಈ ಬಗ್ಗೆ ಬೋಧಕ ವರ್ಗಕ್ಕೆ ಇ-ಮೇಲ್ ಮಾಡಿದ್ದಾರೆ.
"ನಾನು ಈ ಸಂಸ್ಥೆಗೆ 2019ರಲ್ಲಿ ಸೇರ್ಪಡೆಗೊಂಡಿದ್ದೇನೆ. ಆದರೆ, ಇದೀಗ ನನ್ನ ಹುದ್ದೆಯನ್ನು ತೊರೆಯುತ್ತಿದ್ದು, ಅದಕ್ಕೆ ಮೂಲ ಕಾರಣವೆಂದರೆ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದಲ್ಲಿ ನಾನು ಎದುರಿಸಿದ ಜಾತಿ ತಾರತಮ್ಯವಾಗಿದೆ" ಎಂದು ಹೇಳಿದ್ದಾರೆ.
ಇದನ್ನು ಓದಿ: ಮರಾಠ ಮೀಸಲಾತಿ : ಕೇಂದ್ರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!
ಇನ್ನು, ಪ್ರಾಧ್ಯಾಪಕ ತಮ್ಮ ರಾಜೀನಾಮೆ ಪತ್ರದಲ್ಲಿ ಜಾತಿ ತಾರತಮ್ಯದ ಬಗ್ಗೆ ಮಾತನಾಡಿದ್ದರೂ ಸಹ ಐಐಟಿ-ಎಂ ಇದಕ್ಕೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಆದರೆ, ಬಳಿಕ ಹೇಳಿಕೆ ನೀಡಿದ ಪ್ರಧಾನ ಸಂಸ್ಥೆ "ಈ ಇಮೇಲ್ ಕುರಿತು ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆಗಳಿಲ್ಲ. ಇನ್ನು, ಇಲ್ಲಿನ ನೌಕರರು ಮತ್ತು ವಿದ್ಯಾರ್ಥಿಗಳಿಂದ ಸಂಸ್ಥೆಯ ಬಗ್ಗೆ ಪಡೆದ ಯಾವುದೇ ದೂರುಗಳು, ಕುಂದುಕೊರತೆಗಳನ್ನು ಪರಿಹರಿಸುವ ಕೆಲಸ ಮಾಡಲಾಗುತ್ತದೆ" ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದ ಈ ಇ-ಮೇಲ್ ಅನ್ನು ಐಐಟಿ-ಎಂ ವಿದ್ಯಾರ್ಥಿಗಳ ಉಪಕ್ರಮವಾದ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ ಕೂಡ ರಿಟ್ವೀಟ್ ಮಾಡಿದೆ.