ಚೆನ್ನೈ:ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರೊ.ತಲಪ್ಪಿಲ್ ಪ್ರದೀಪ್ ಅವರು ಪ್ರತಿಷ್ಠಿತ ‘ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ಇಂಟರ್‌ನ್ಯಾಷನಲ್ ಪ್ರೈಸ್ ಫಾರ್ ವಾಟರ್’ (ಪಿಎಸ್‌ಐಪಿಡಬ್ಲ್ಯು) 10ನೇ ಆವೃತ್ತಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಯಾವುದೇ ಜಲ-ಸಂಬಂಧಿತ ಕ್ಷೇತ್ರದಲ್ಲಿನ 'ಪ್ರಚೋದಕ ಆವಿಷ್ಕಾರ'ಕ್ಕಾಗಿ ನೀಡಲಾಗುವ 'ಸೃಜನಶೀಲತೆ ಪ್ರಶಸ್ತಿ' ವಿಭಾಗದ ಅಡಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರೊ. ಟಿ. ಪ್ರದೀಪ್ ಅವರ ಸಂಶೋಧನಾ ಗುಂಪು, ಕೈಗೆಟುಕುವ ಹಾಗೂ ಸಮರ್ಥನೀಯ ಮತ್ತು ಕುಡಿಯುವ ನೀರಿನಿಂದ ಆರ್ಸೆನಿಕ್ ಅನ್ನು ತ್ವರಿತವಾಗಿ ತೆಗೆದುಹಾಕುವಂತಹ ಪರಿಸರ ಸ್ನೇಹಿ 'ವಾಟರ್ ಪಾಸಿಟಿವ್' ನ್ಯಾನೊಸ್ಕೇಲ್ ವಸ್ತುಗಳನ್ನು ಅಭಿವೃದ್ಧಿಪಡಿಸಿದೆ. ಪ್ರೊ. ಪ್ರದೀಪ್ ಅವರು ಈ ಹಿಂದೆ ಪದ್ಮಶ್ರೀ ಮತ್ತು ನಿಕ್ಕಿ ಏಷ್ಯಾ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ತಂತ್ರಜ್ಞಾನಗಳು 1.2 ಕೋಟಿಗೂ ಹೆಚ್ಚು ಜನರಿಗೆ ಶುದ್ಧ ನೀರನ್ನು ತಲುಪಿಸುತ್ತಿವೆ.
ಪ್ರಶಸ್ತಿಯ ಮೊತ್ತ ಎಷ್ಟು ಗೊತ್ತಾ?:ದ್ವೈ-ವಾರ್ಷಿಕ ಅಂತಾರಾಷ್ಟ್ರೀಯ ವೈಜ್ಞಾನಿಕ ಪ್ರಶಸ್ತಿಯನ್ನು 2002ರ ಅ. 21ರಂದು ಸೌದಿ ಅರೇಬಿಯಾದ ರಾಜಕುಮಾರ ಸುಲ್ತಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ ಸ್ಥಾಪಿಸಿದ್ದು, ಪ್ರಶಸ್ತಿಯು US $ 2,66,000 (ಅಂದಾಜು ರೂ. 2 ಕೋಟಿ) ನಗದು ಜೊತೆಗೆ ಚಿನ್ನದ ಪದಕ, ಟ್ರೋಫಿ ಮತ್ತು ಪ್ರಮಾಣಪತ್ರ ಹೊಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭ 2022ರ ಸೆಪ್ಟೆಂಬರ್ 12 ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ. ಪ್ರಶಸ್ತಿಯು ಪ್ರೊ. ಟಿ. ಪ್ರದೀಪ್ ಅವರ ತಂಡದ ಸದಸ್ಯರಾದ ಅವುಲಾ ಅನಿಲ್ ಕುಮಾರ್, ಚೆನ್ನು ಸುಧಾಕರ್, ಶ್ರೀತಮಾ ಮುಖರ್ಜಿ, ಅಂಶುಪ್ ಮತ್ತು ಮೋಹನ್ ಉದಯಶಂಕರ್ ಅವರನ್ನೂ ಗುರುತಿಸಿದೆ.