ಖರಗ್‌ಪುರ್ (ಪಶ್ಚಿಮ ಬಂಗಾಳ): ಭಾರತದ ಹೊರಗೆ ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಯ ಭಾಗವಾಗಿ ಮಲೇಷಿಯಾದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಐಐಟಿ(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಖರಗ್‌ಪುರ್ ಯೋಚಿಸಿದೆ ಎಂದು ಪ್ರತಿಷ್ಟಿತ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಿ.ಕೆ.ತಿವಾರಿ ಶನಿವಾರ ತಿಳಿಸಿದ್ದಾರೆ. ನಿನ್ನೆ ನಡೆದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್‌ಪುರ್ 68ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಶಿಕ್ಷಣ ಸಂಸ್ಥೆಯು ವಿಶ್ವದ ಟಾಪ್ 10 ಸಂಸ್ಥೆಗಳಲ್ಲಿ ಒಂದಾಗುವ ಗುರಿ ಹೊಂದಿದೆ ಎಂದು ಹೇಳಿದರು.
ಐಐಟಿ ಮಲೇಷಿಯಾ ಸ್ಥಾಪನೆಯ ಮೂಲಕ ಶಿಕ್ಷಣದ ಉತ್ಕೃಷ್ಟತೆಯಲ್ಲಿ ವಿಶ್ವವ್ಯಾಪಿಯಾಗಿ ಒಂದು ಮಾದರಿಯನ್ನು ಸ್ಥಾಪಿಸುವ ಗುರಿಯನ್ನು ನಮ್ಮ ಸಂಸ್ಥೆ ಹೊಂದಿದೆ. ಮಲೇಷಿಯಾದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮುಖೇನ ಭಾರತೀಯ ಶಿಕ್ಷಣದ ಗುಣಮಟ್ಟವನ್ನು ಉತ್ತೇಜಿಸುವಲ್ಲಿ ಐಐಟಿ ಖರಗ್‌ಪುರ್ ಜಾಗತಿಕ ಹೆಗ್ಗುರುತು ಮೂಡಿಸುತ್ತಿದೆ ಎಂದು ಅವರು ಹೇಳಿದರು. ಇದೇ ವೇಳೆ ತಿವಾರಿ, ಹೊಸ ಶಿಕ್ಷಣ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಗುವುದು ಎಂಬ ಬಗ್ಗೆ ತಿಳಿಸಿಲ್ಲ. ಮಲೇಷಿಯಾದ ಯಾವುದಾದರು ಶಿಕ್ಷಣ ಸಂಸ್ಥೆಯೊಂದಿಗೆ ಜಂಟಿಯಾಗಿ ಪ್ರಾರಂಭಿಸುತ್ತಾರೋ ಅಥವಾ ಸ್ವತಂತ್ರವಾಗಿ ತಾವೇ ಸ್ಥಾಪಿಸುತ್ತಾರೋ ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಕಳೆದೆರಡು ವರ್ಷಗಳಲ್ಲಿ ಐಐಟಿ ಖರಗ್‌ಪುರ್‌ದ ಆವಿಷ್ಕಾರದ ಯಶಸ್ಸಿನ ಕಥೆಗಳನ್ನು ಪಟ್ಟಿ ಮಾಡಿದ ಅವರು, ಸಂಸ್ಥೆಯು ತನ್ನ ಸಿಬ್ಬಂದಿ ಮತ್ತು ಸಂಶೋಧಕರು ರಚಿಸಿದ 75 ಆವಿಷ್ಕಾರಗಳ ಸಂಕಲನವನ್ನು ಸಂಗ್ರಹಿಸಿದೆ. ಕೊರೊನಾ ವೈರಸ್ ಸಂದರ್ಭದಲ್ಲಿ ಸಂಸ್ಥೆ ಅಭಿವೃದ್ಧಿಪಡಿಸಿದಂತಹ ಕೋವಿರ‍್ಯಾಪ್ ಡಯಾಗ್ನೋಸ್ಟಿಕ್ ಕಿಟ್ ಸುಮಾರು 6.7 ಕೋಟಿ ರೂ. ಗೆ ಮಾರಾಟವಾಗಿದ್ದರೆ, ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾದ ಅನೇಕ ಯಶಸ್ವಿ ಹೊಸ ಸಾಧನಗಳನ್ನು ಒಂದು ಕೋಟಿ ರೂ.ಗಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯು ಈಗಾಗಲೇ 25 ಹೊಸ ಆವಿಷ್ಕಾರಗಳಿಗೆ ಬೆಂಬಲವನ್ನು ನೀಡುತ್ತಿದೆ. ಸಂಸ್ಥೆಯ ಕ್ಯಾಂಪಸ್ ಒಳಗೆ 2020ರಲ್ಲಿ 260 ಹಾಸಿಗೆಗಳ ಸೌಲಭ್ಯವಿರುವ ಶ್ಯಾಮ್ ಪ್ರಸಾದ್ ಮುಖರ್ಜಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿರುವ ಅಮೆರಿಕದ ಉದ್ಯಮಿ ವಿನೋದ್ ಗುಪ್ತಾ ಅವರಿಂದ ಹಿಡಿದು ಗೂಗಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ ಸಾವಿರಾರು ಸಂಖ್ಯೆಯ ಹಳೇ ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಪ್ರಶಸ್ತಿಗಳೊಂದಿಗೆ ಸಂಸ್ಥೆಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.