ನವದೆಹಲಿ:ದೆಹಲಿಯಲ್ಲಿನ ಗಾಳಿಯ ಗುಣಮಟ್ಟದ ಸೂಚ್ಯಂಕವು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆ (IIT)-ಕಾನ್ಪುರವು 'ಕೃತಕ ಮಳೆ'ಯನ್ನು ಉಂಟುಮಾಡುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಿದೆ. ಇದು ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿನ ವಾಯು ಮಾಲಿನ್ಯದ ಸಮಸ್ಯೆಗೆ ಸಂಭಾವ್ಯ ಪರಿಹಾರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಐಐಟಿ-ಕಾನ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಗಿರುವ ಮನೀಂದ್ರ ಅಗರವಾಲ್ ಅವರು ಈ ವಿಶಿಷ್ಟ ಯೋಜನೆಯನ್ನು ಕೈಗೊಂಡಿದ್ದಾರೆ. ಕ್ಲೌಡ್ ಸೀಡಿಂಗ್ (ಮೋಡ ಬಿತ್ತನೆ) ಎಂದೂ ಕರೆಯಲ್ಪಡುವ 'ಕೃತಕ ಮಳೆ'ಯು ಹವಾಮಾನ ಮಾರ್ಪಾಡು ತಂತ್ರವಾಗಿದ್ದು, ಮೋಡಗಳೊಳಗಿನ ಸೂಕ್ಷ್ಮ ಭೌತಿಕ ಪ್ರಕ್ರಿಯೆಗಳನ್ನು ಬದಲಾಯಿಸುವ ಮೂಲಕ ಮಳೆಯನ್ನು ಉಂಟುಮಾಡುವ ಕಾರ್ಯವಿಧಾನವಾಗಿದೆ.
ತಮ್ಮ ತಂಡವು ಈ ಕುರಿತು ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆಗೆ, ಪ್ರೊಫೆಸರ್ ಮನೀಂದ್ರ ಅವರು ಪ್ರತಿಕ್ರಿಯಿಸಿದ್ದು, "ಇದು ಐದು ವರ್ಷಗಳ ಕಠಿಣ ಪರಿಶ್ರಮದಿಂದ ಕಂಡುಕೊಳ್ಳಲಾಗಿದೆ. ವಿಮಾನದ ರೆಕ್ಕೆಗಳಲ್ಲಿ ಕೆಲವು ಮಾರ್ಪಾಡುಗಳಿವೆ ಮತ್ತು ನಾವು ಅಮೆರಿಕದಿಂದ ಕೆಲವು ಭಾಗಗಳನ್ನು ಆಮದು ಮಾಡಿಕೊಳ್ಳಬೇಕಾಯಿತು'' ಎಂದಿದ್ದಾರೆ.
ಅಮೆರಿಕದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಮಾತುಕತೆಯಲ್ಲಿ ಸಾಕಷ್ಟು ಸಮಯ ವ್ಯಯವಾಯಿತು. ತದನಂತರ ಕೋವಿಡ್ ಕೂಡ ಬಂತು. ಹಾಗಾಗಿ ಅವರು ನಮ್ಮ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕಾಯಿತು . ಪ್ರಧಾನ ಮಂತ್ರಿಗಳ ರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA), ಗೃಹ ಸಚಿವಾಲಯ ಮತ್ತು ವಿಶೇಷ ರಕ್ಷಣಾ ಗುಂಪು (SPG) ಸೇರಿದಂತೆ ಅನೇಕ ಅನುಮೋದನೆಗಳನ್ನು ಪಡೆದಿದ್ದೇವೆ ಎಂದಿದ್ದಾರೆ.