ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯು (Indian Institute of Technology - IIT-D) ವಿದ್ಯಾರ್ಥಿಗಳಿಗೆ ಒತ್ತಡವನ್ನು ಕಡಿಮೆ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ತನ್ನ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿಷ್ಕರಿಸಿರುವ ಐಐಟಿ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳನ್ನು ಕೈಬಿಟ್ಟಿದೆ. ಈ ವಿಷಯವನ್ನು ಸಂಸ್ಥೆಯ ನಿರ್ದೇಶಕ ರಂಗನ್ ಬ್ಯಾನರ್ಜಿ ತಿಳಿಸಿದರು.
ದೇಶಾದ್ಯಂತ ಇರುವ ಐಐಟಿಗಳಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಈ ಬೆಳವಣಿಗೆ ಪಠ್ಯಕ್ರಮ ಮತ್ತು ಕಠಿಣ ಅಧ್ಯಯನ ವೇಳಾಪಟ್ಟಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬೆನ್ನಲ್ಲೇ ದೆಹಲಿ ಐಐಟಿ ಒಂದು ಹಂತದ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದು ಮಾಡಲು ತೀರ್ಮಾನಿಸಿದೆ.
"ಈ ಮೊದಲು ಒಂದು ಸೆಮಿಸ್ಟರ್‌ನಲ್ಲಿ ಎರಡು ಸೆಟ್‌ಗಳ ಪರೀಕ್ಷೆಗಳನ್ನು ಹೊಂದಿದ್ದೆವು. ಪ್ರತಿ ಸೆಮಿಸ್ಟರ್‌ನ ಕೊನೆಯಲ್ಲಿ ಅಂತಿಮ ಪರೀಕ್ಷೆಗಳು ನಡೆಯುತ್ತಿದ್ದವು. ಹಲವಾರು ನಿರಂತರವಾದ ಮೌಲ್ಯಮಾಪನ ಕಾರ್ಯವಿಧಾನಗಳನ್ನು ನಾವು ಹೊಂದಿದ್ದೇವು. ಇದೀಗ ಎರಡು ಸೆಟ್‌ಗಳ ಪೈಕಿ ಒಂದು ಸೆಟ್ ಪರೀಕ್ಷೆ ಸೆಮಿಸ್ಟರ್ಗಳನ್ನು ಕೈಬಿಡುವ ನಿರ್ಧಾರ ಕೈಗೊಂಡಿದ್ದೇವೆ'' ಎಂದು ರಂಗನ್ ಬ್ಯಾನರ್ಜಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದರು.
"ನಾವು ಆಂತರಿಕ ಸಮೀಕ್ಷೆ ನಡೆಸಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಪ್ರತಿಕ್ರಿಯೆಗಳನ್ನು ಆಧರಿಸಿ ಒಂದು ಸೆಟ್ ಪರೀಕ್ಷೆಗಳನ್ನು ಕೈಬಿಡಲು ತೀರ್ಮಾನಿಸಿದ್ದೇವೆ. ಆದ್ದರಿಂದ ಈಗ ಸಾಮಾನ್ಯ ಮೌಲ್ಯಮಾಪನಗಳ ಜೊತೆಗೆ ಎರಡು ಸೆಟ್ ಪರೀಕ್ಷೆಗಳು ಇರುತ್ತವೆ. ಪರೀಕ್ಷಾ ಕ್ಯಾಲೆಂಡರ್ ಹೆಚ್ಚಿಗೆ ಇದೆ ಎಂದೂ ನಾವು ಭಾವಿಸಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳ ಹೊರೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ನಿರ್ಧರಿಸಿದ್ದೇವೆ'' ಎಂದು ಅವರು ವಿವರಿಸಿದರು.
ಮುಂದುವರೆದು ಮಾತನಾಡಿ, ''ನಮ್ಮ ನಿರ್ಧಾರವನ್ನು ಸೆನೆಟ್ ಅನುಮೋದಿಸಿದೆ. ಪ್ರಸ್ತುತ ನಡೆಯುತ್ತಿರುವ ಸೆಮಿಸ್ಟರ್‌ನಿಂದಲೇ ಇದನ್ನು ಜಾರಿಗೊಳಿಸಲಾಗುವುದು. ಎರಡು ಪರೀಕ್ಷೆಗಳಿಗೆ ಗರಿಷ್ಠ ಶೇ.80 ವೇಟೇಜ್ ನಿಗದಿಪಡಿಸಿದ್ದೇವೆ'' ಎಂದು ರಂಗನ್ ಹೇಳಿದರು. "ವಿದ್ಯಾರ್ಥಿಗಳಲ್ಲಿ ಒತ್ತಡದ ಪರಿಸ್ಥಿತಿ ನಿಭಾಯಿಸಲು ಮತ್ತು ಮಾನಸಿಕ ಯೋಗಕ್ಷೇಮ ಖಚಿತಪಡಿಸಿಕೊಳ್ಳಲು ಎಲ್ಲ ಐಐಟಿಗಳಲ್ಲಿ ಕೆಲ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇವುಗಳೊಂದಿಗೆ ದೆಹಲಿಯ ಐಐಟಿ ಮಾರ್ಗದರ್ಶನ ಮತ್ತು ಸಂವಾದದಂತಹ ಚಟುವಟಿಕೆಗಳನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ವಿಶೇಷವಾಗಿ, ತರಗತಿಯ ಹೊರಗಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ನಡುವೆ ಭೋಜನ ಅಥವಾ ಊಟದ ಸಮಯದಲ್ಲಿ ಅನೌಪಚಾರಿಕ ಸಂವಹನಗಳಿಗೆ ಕ್ರಮ ವಹಿಸಿದ್ದೇವೆ'' ಎಂದರು.
ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಬಗ್ಗೆ ಕಳೆದ ತಿಂಗಳು ಸಂಸತ್ತಿಗೆ ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಐಐಟಿಗಳಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ. 2018ರಿಂದ 2023ರವರೆಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 98 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 39 ಆತ್ಮಹತ್ಯೆಗಳು ಐಐಟಿಗಳಲ್ಲಿ ಸಂಭವಿಸಿವೆ ಎಂದು ಸರ್ಕಾರ ತಿಳಿಸಿತ್ತು.
ಇದನ್ನೂ ಓದಿ:ಒಂದೇ ವರ್ಷದಲ್ಲಿ ಐಐಟಿ, ಎನ್‌ಐಟಿ, ಐಐಎಂ ಸಂಸ್ಥೆಯ 16 ವಿದ್ಯಾರ್ಥಿಗಳ ಆತ್ಮಹತ್ಯೆ: ಕೇಂದ್ರ ಶಿಕ್ಷಣ ಇಲಾಖೆ ಮಾಹಿತಿ