ನವದೆಹಲಿ: 'ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು: ಸುಸ್ಥಿರತೆ 2023' ಪ್ರಕಾರ ಐಐಟಿ ಬಾಂಬೆ ಭಾರತದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತೀಚೆಗೆ ಲಂಡನ್‌ನಲ್ಲಿ ಬಿಡುಗಡೆಯಾದ ಶ್ರೇಯಾಂಕಗಳಲ್ಲಿ, ಉದ್ಯೋಗ, ಸಾಮಾಜಿಕ ಕಾಳಜಿ ಮತ್ತು ಕಾಲೇಜು ವಾತಾವರಣದ ಉತ್ಕೃಷ್ಟತೆಗಾಗಿ ಐಐಟಿ ಬಾಂಬೆಯನ್ನು ಭಾರತದ ಉನ್ನತ ಉನ್ನತ ಶಿಕ್ಷಣ ಸಂಸ್ಥೆ ಎಂದು ಪರಿಗಣಿಸಿ, ಶ್ರೇಯಾಂಕ ನೀಡಲಾಗಿದೆ.
ಐಐಟಿ ಬಾಂಬೆ 281-300 ಶ್ರೇಣಿಯ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದ್ದು, ನಂತರದ ಸ್ಥಾನದಲ್ಲಿ ಐಐಟಿ ದೆಹಲಿ 321 - 340ರ ಶ್ರೇಣಿ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (JNU) 361-380 ಶ್ರೇಣಿಯಲ್ಲಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದಲ್ಲದೇ, ಐಐಟಿ ಬಾಂಬೆ ತನ್ನ ಪದವೀಧರರ ಉದ್ಯೋಗದ ಆಧಾರದ ಮೇಲೆ ವಿಶ್ವದ ಅಗ್ರ 100 ಸಂಸ್ಥೆಗಳಲ್ಲಿ ಒಂದು ಎನಿಸಿಕೊಂಡಿದೆ.
ಐಐಟಿ ದೆಹಲಿ ತನ್ನ ಉದ್ಯೋಗ ಮತ್ತು ಕಾಲೇಜು ವಾತಾವರಣಕ್ಕಾಗಿ ಶ್ರೇಯಾಂಕವನ್ನು ಪಡೆದಿದ್ದರೆ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (JNU) ಲಿಂಗ ಸಮಾನತೆ ಮತ್ತು ಇತರ ಅಸಮಾನತೆಗಳನ್ನು ತೆಗೆದುಹಾಕುವಲ್ಲಿ ಶ್ರೇಯಾಂಕವನ್ನು ಪಡೆದಿದೆ. ಸ್ಪರ್ಧೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ವಿಷಯದಲ್ಲಿ ದೆಹಲಿ ವಿಶ್ವವಿದ್ಯಾಲಯ ಭಾರತದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಜೆಎನ್‌ಯು ವಿದ್ಯಾರ್ಥಿಗಳ ಹರ್ಷ:ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶ್ರೇಯಾಂಕದಲ್ಲಿ ವಿಶ್ವವಿದ್ಯಾಲಯದ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಜೆಎನ್‌ಯು ಉಪಕುಲಪತಿ ಪ್ರೊಫೆಸರ್ ಶಾಂತಿಶ್ರೀ ಡಿ.ಪಂಡಿತ್, ಡಾ. ಭೀಮ್ ರಾವ್ ಅಂಬೇಡ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಿದ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಭಿನಂದನೆಗಳು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.