ಹಜಾರಿಬಾಗ್ :ಜಾರ್ಖಂಡ್‌ನಲ್ಲಿರುವ ದೈಹಾರ್ ಒಂದು ಕುಗ್ರಾಮ. ಕುಡಿಯುವ ನೀರು ಮತ್ತು ಕಾಂಕ್ರೀಟ್ ರಸ್ತೆಗಳಂತಹ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಈ ಹಳ್ಳಿಯ ಮಹಿಳೆಯರು ಕುಡಿಯುವ ನೀರು ತರಲು ದೂರದ ಬಾವಿಗಳಿಗೆ ನಡೆದು ಹೋಗಬೇಕಿತ್ತು.
ಈ ಸಮಸ್ಯೆ ಓರ್ವ ಮಹಿಳೆಯನ್ನೇ ಬಲಿ ಪಡೆಯಿತು. ಈ ಘಟನೆ ಗ್ರಾಮದ ನಿವಾಸಿಗಳಲ್ಲಿ ಒಬ್ಬರಾದ ಐಐಟಿ ಹಳೆ ವಿದ್ಯಾರ್ಥಿ ಹಾಗೂ ಒಎನ್‌ಜಿಸಿಯಲ್ಲಿ ಇಂಜಿನಿಯರ್ ಆಗಿರುವ ಅಮಿತೇಶ್ ಕುಮಾರ್ ಅವರ ಮನಕಲಕಿತು. ತನ್ನ ಗ್ರಾಮಕ್ಕೆ ಎಲ್ಲಾ ಮೂಲಸೌಲಭ್ಯ ಒದಗುವಂತೆ ಮಾಡಬೇಕು ಎಂದು ಅವರು ನಿರ್ಧರಿಸಿದರು. ಆ ಒಂದು ನಿರ್ಧಾರ ಇಂದು ಈ ಹಳ್ಳಿಯ ದಿಕ್ಕನ್ನೇ ಬದಲಿಸುತ್ತಿದೆ.
ದೈಹಾರ್ ಗ್ರಾಮದ ಅಭಿವೃದ್ಧಿಗೆ ಪಣ ತೊಟ್ಟ ಎಂಜಿನಿಯರ್.. ಕುಮಾರ್ ಎಂಬ ಯುವಕ ಒಎನ್ಜಿಸಿ, ರಿಲಯನ್ಸ್ ಮತ್ತು ಓಲಾಗಳಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ಸಹಾಯದಿಂದ ಗ್ರಾಮದಲ್ಲಿ ನೀರು ಸಂಗ್ರಹಣಾ ಸೌಲಭ್ಯಗಳು, ಹಾಟ್ ಸ್ಪಾಟ್ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ ಮತ್ತು ಬೀದಿ ದೀಪಗಳ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ.
ಸಿಎಸ್‌ಆರ್ ನಿಧಿಯ ಅಡಿಯಲ್ಲಿ ಗ್ರಾಮಕ್ಕೆ ಸುಮಾರು 13 ಕೋಟಿ ರೂ. ಅನುದಾನವನ್ನು ನೀಡಲಾಗಿತ್ತು. ಅದರಲ್ಲಿ ಮೊದಲ ಹಂತವಾಗಿ 1.5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕುಮಾರ್ ಈವರೆಗೆ 30 ಲಕ್ಷ ರೂ. ಪಡೆದು ಗ್ರಾಮದ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ.
ಈಟಿವಿ ಭರತ್ ಜೊತೆ ಮಾತನಾಡಿದ ಕುಮಾರ್, "ನನ್ನ ಹಳ್ಳಿಯ ಮಹಿಳೆಯ ಸಾವು ನನಗೆ ಹಳ್ಳಿಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿತು. ನನ್ನ ಹಳ್ಳಿಯನ್ನು ಅಭಿವೃದ್ಧಿಪಡಿಸುವುದು ನನ್ನ ಜವಾಬ್ದಾರಿ ಎಂದು ಕುಮಾರ್ ಹೇಳಿದ್ರು. ನಮ್ಮ ಹಳ್ಳಿಯಿಂದ ಆರಂಭಿಸಿ ದೇಶದ ಹಳ್ಳಿಗಳ ಅಭಿವೃದ್ಧಿಗೆ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಸರ್ಕಾರದ ಅನುದಾನದ ನೆರವಿನಿಂದ ಇಂದು 7,000 ಜನಸಂಖ್ಯೆ ಹೊಂದಿರುವ ದೈಹಾರ್ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿರುವುದಾಗಿ ಹೇಳಿದ್ರು. ಹಳ್ಳಿಯ ನಾಲ್ಕು ಸ್ಥಳಗಳಲ್ಲಿ ಹಾಟ್‌ಸ್ಪಾಟ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದು ಕೋವಿಡ್ ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದ್ರು.
ಕುಗ್ರಾಮವೀಗ ಸ್ಮಾರ್ಟ್ ಗ್ರಾಮ ಕುಮಾರ್ ಹಾಗೂ ಅವರ ಮೂವರು ಸ್ನೇಹಿತರು ಸೇರಿ ರಚಿಸಿಕೊಂಡಿರುವ ನಾಲ್ಕು ಜನರ ಸಮಿತಿಯು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮಿತಿಯು ಹಂತ ಹಂತವಾಗಿ ಅಭಿವೃದ್ಧಿಯ ಯೋಜನೆಯನ್ನು ರೂಪಿಸಿದೆ.
ಒಎನ್ಜಿಸಿ ಕುಡಿಯುವ ನೀರಿಗೆ ಹಣ ಮಂಜೂರು ಮಾಡಿದರೆ, ಓಲಾ ಹಳ್ಳಿಯನ್ನು ಸುಂದರವಾಗಿ ಕಾಣುವಂತೆ ಮಾಡಲು ಹಣ ನೀಡಿತು ಮತ್ತು ರಿಲಯನ್ಸ್ ಫೌಂಡೇಶನ್ ರಸ್ತೆಗಳು ಮತ್ತು 50 ಮನೆಗಳಿಗೆ ಆರ್ಥಿಕ ನೆರವು ನೀಡಿತು. ಇಡೀ ಗ್ರಾಮದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಆಧುನಿಕ ಆಸ್ಪತ್ರೆ, ಶಾಲೆ ಮತ್ತು ಸೌರ ವಿದ್ಯುತ್ ಫಲಕಗಳ ಮೂಲಕ ದಿನದ 24 ಗಂಟೆ ಉಚಿತ ವಿದ್ಯುತ್ ಒದಗಿಸಲಾಗುವುದು. ಈ ಮಧ್ಯೆ ಎಂಜಿನಿಯರ್ ಕುಮಾರ್‌ಗೆ ಎಲ್ಲಾ ಗ್ರಾಮಸ್ಥರ ಬೆಂಬಲ ಸಿಗುತ್ತಿದೆ. ಮೊದಲು ಕಷ್ಟಕರವೆನಿಸಿದ್ದ ಕೆಲಸ ಈಗ ಸಹಕಾರ, ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಇಂದು ತೃಪ್ತಿದಾಯಕ ಮಾರ್ಪಟ್ಟಿದೆ ಅಂತಾರೆ ಕುಮಾರ್.