ನವದೆಹಲಿ: ಸರ್ಕಾರಿ ಉದ್ಯೋಗದ ನೇಮಕಾತಿಗಳು ಅರ್ಹತೆಯ ಆಧಾರದ ಮೇಲೆ ನಡೆಯಬೇಕು. ಕಡಿಮೆ ಅಂಕ ಪಡೆದವರನ್ನು ನೇಮಕ ಮಾಡಿಕೊಳ್ಳುವುದು ಮತ್ತು ಹೆಚ್ಚು ಅಂಕ ಪಡೆದ ಅಭ್ಯರ್ಥಿಯನ್ನು ನಿರ್ಲಕ್ಷಿಸುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ನ್ಯಾ. ಎಲ್. ನಾಗೇಶ್ವರ್ ರಾವ್ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠವು ಜಾರ್ಖಂಡ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದ್ದು, ಅತೀ ಹೆಚ್ಚು ಅಂಕ ಪಡೆದು ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದ 43 ಮಂದಿಯ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ನಡೆಸಲು ಅನುಮತಿ ನೀಡಲಾಯಿತು.
2008ರಲ್ಲಿ ಜಾರ್ಖಂಡ್ ಸರ್ಕಾರದ ಗೃಹ ಇಲಾಖೆಯಿಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳು, ಅಟೆಂಡೆಂಟ್‌ಗಳು (ಸಾರ್ಜೆಂಟ್) ಮತ್ತು ಕಂಪನಿ ಕಮಾಂಡರ್‌ಗಳ ಹುದ್ದೆಗಳ ನೇಮಕಾತಿಗಾಗಿ ಜಾಹೀರಾತು ನೀಡಲಾಗಿತ್ತು.
ಬಳಿಕ ಅಂತಿಮ ಫಲಿತಾಂಶವನ್ನು ಪ್ರಕಟಿಸಿ 382 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ನಂತರ ಆಯ್ಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಪರೀಕ್ಷಿಸಲು ರಾಜ್ಯ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಈ ಕುರಿತು ಹುದ್ದೆಗೆ ಆಯ್ಕೆಯಾಗದೆ ಉಳಿದ ಅಭ್ಯರ್ಥಿಗಳು ರಾಂಚಿಯ ಜಾರ್ಖಂಡ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.