ಭೋಪಾಲ್ (ಮಧ್ಯಪ್ರದೇಶ): ದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿರುವ ಕಾಂಗ್ರೆಸ್ನಿಂದ ಬುಡಕಟ್ಟು ಜನಾಂಗದ ಜನರ ನಿರ್ಲಕ್ಷ್ಯವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆರೋಪಿಸಿದ್ದು, ಇದೀಗ ನಿರ್ಲಕ್ಷಿಸಲ್ಪಟ್ಟ ಬುಡಕಟ್ಟು ಸಮುದಾಯದವರು ಭಾರತದ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದಾರೆ ಎಂದರು.
ಬುಡಕಟ್ಟು ಸಮುದಾಯ ಭಾರತೀಯ ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, ಭಗವಾನ್ ರಾಮ ಕೂಡ ವನವಾಸದ ಸಂದರ್ಭದಲ್ಲಿ ಆದಿವಾಸಿಗಳಿಂದ ಸ್ಫೂರ್ತಿ ಪಡೆದುಕೊಂಡಿದ್ದನು. ಬುಡಕಟ್ಟು ಜನರೊಂದಿಗೆ ರಾಮ ಕಳೆದ ಸಮಯ ಅವರ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಿತ್ತು. ಜೊತೆಗೆ ಅವರನ್ನು ಅತ್ಯಂತ ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸಿತ್ತು ಎಂದು ಹೇಳಿದರು.
ಬುಡಕಟ್ಟು ಜನಾಂಗದ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮಶತದಿನೋತ್ಸವವನ್ನು ಜನ್ಜಾತೀಯ (Janjatiya Gaurav Diwas) ಗೌರವ ದಿವಸವಾಗಿ ಆಚರಣೆ ಮಾಡಲಾಗುತ್ತಿದ್ದು, ಅದರಲ್ಲಿ ಭಾಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಆದಿವಾಸಿಗಳು ಇದೀಗ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದಾರೆ. ಬಿಜೆಪಿ ಸರ್ಕಾರ ಆರಂಭಿಸಿರುವ ಅನೇಕ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಅವರು ಪಡೆದುಕೊಳ್ಳುತ್ತಿದ್ದಾರೆ ಎಂದರು.