ಲಡಾಖ್: ಬಲು ಅಪರೂಪದ ಮತ್ತು ಅತ್ಯಂತ ಆಕರ್ಷಕವಾದ ಕಾಡು ಬೆಕ್ಕು ಜಾತಿಗೆ ಸೇರಿದ ಹಿಮಾಲಯನ್ ಲಿಂಕ್ಸ್ ಅಥವಾ ಯುರೇಷಿಯನ್ ಲಿಂಕ್ಸ್ ಜಮ್ಮು ಮತ್ತು ಕಾಶ್ಮೀರದ ಲೇಹ್-ಲಡಾಖ್ನಲ್ಲಿ ಕಾಣಿಸಿಕೊಂಡಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಕಾಡು ಬೆಕ್ಕಿನ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡು ನೆಟಿಜೆನ್ಸ್ ಆಶ್ಚರ್ಯ ಚಕಿತರಾಗಿದ್ದಾರೆ.
ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟರ್ ಪೋಸ್ಟ್ನಲ್ಲಿ, ‘‘ಸುಂದರವಾದ ಮತ್ತು ಬಲು ಅಪರೂಪವಾದ ಪ್ರಾಣಿ ಲಡಾಖ್ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಅನೇಕರು ಇದರ ಬಗ್ಗೆ ಕೇಳಿಲ್ಲ, ಇದು ಹಿಮಾಲಯನ್ ಲಿಂಕ್ಸ್. ಭಾರತದಲ್ಲಿ ಕಂಡು ಬರುವ ಅಪರೂಪದ ಕಾಡು ಬೆಕ್ಕಿನ ಜಾತಿಗೆ ಸೇರಿದ್ದಾಗಿದೆ. ಸುಂದರವಾದ ಮತ್ತು ಅಪರೂಪದ ಜೀವಿ ಲೇಹ್ - ಲಡಾಖ್ನಲ್ಲಿ ಕಂಡು ಬಂದಿದೆ. ಈ ವಲಯದಲ್ಲಿ ಹಿಮ ಚಿರತೆ ಮತ್ತು ಪಲ್ಲಾಸ್ ಬೆಕ್ಕು ಮತ್ತು ಇತರೆ ಜೀವಿಗಳು ಕಂಡು ಬರುತ್ತವೆ. ಈಗ ನೀವು ವಿಡಿಯೋದಲ್ಲಿ ಕಾಣಿಸುತ್ತಿರುವ ಇತರ ಪ್ರಾಣಿಗಳು ಯಾವುವು? ಮತ್ತು ಅವು ಏನು ಮಾಡುತ್ತಿವೆ ಎಂದು ನನಗೆ ಹೇಳಬಲ್ಲಿರಾ'' ಎಂದು ಬರೆದುಕೊಂಡಿದ್ದಾರೆ.
ಕಸ್ವಾನ್ ಅವರು ಹಂಚಿಕೊಂಡ 45 ಸೆಕೆಂಡುಗಳ ವಿಡಿಯೋ ಕ್ಲಿಪ್ನಲ್ಲಿ, ಅಪರೂಪದ ಕಾಡು ಬೆಕ್ಕಿನ ಮೇಲೆ ಬೀದಿ ನಾಯಿಗಳ ಗುಂಪೊಂದು ಬೊಗಳುತ್ತಿದೆ ಆದರೆ ಲಿಂಕ್ಸ್ ನಿಧಾನವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ನೆಟ್ಟಿಗರು ವೀಕ್ಷಿಸಿ ರೀಟ್ವೀಟ್ ಮಾಡಿದ್ದಾರೆ ಮತ್ತು ಕೆಲವರು ಹಂಚಿಕೊಂಡಿದ್ದಾರೆ. ಕಸ್ವಾನ್ ಅಪಲೋಡ್ ಮಾಡಿದ ವಿಡಿಯೋ ಕೇವಲ 16 ಗಂಟೆಗಳ ಒಳಗೆ ಸುಮಾರು ಒಂದು ಮಿಲಿಯನ್ (ಹತ್ತು ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ.