ಕರ್ನಾಟಕ

karnataka

ETV Bharat / bharat

ಆರೋಗ್ಯ ವಿಮೆ ಪಾಲಿಸಿ ಇದ್ದರೆ ಸಕಾಲಕ್ಕೆ ರಿನ್ಯೂ ಮಾಡಿ.. ಅಪಾಯ ತಪ್ಪಿಸಿ - ಈಟಿವಿ ಭಾರತ ಕನ್ನಡ

ವಿಮಾ ಪಾಲಿಸಿಯನ್ನು ತೆಗೆದುಕೊಂಡ ನಂತರ ಕೆಲವು ರೋಗಗಳಿಗೆ ನಿಗದಿತ ಕಾಯುವ ಅವಧಿ ಇರುತ್ತದೆ. ಇದಕ್ಕೂ ಮೊದಲು ಆ ರೋಗಗಳ ಚಿಕಿತ್ಸೆಗಾಗಿ ಕ್ಲೇಮ್ ಸ್ವೀಕರಿಸಲಾಗುವುದಿಲ್ಲ. ವಿಮಾದಾರರನ್ನು ಅವಲಂಬಿಸಿ, ಈ ಕಾಯುವ ಅವಧಿಯು ಬದಲಾಗುತ್ತದೆ.

ಆರೋಗ್ಯ ವಿಮೆ ಪಾಲಿಸಿ ಇದ್ರೆ ಸಕಾಲಕ್ಕೆ ರಿನ್ಯೂ ಮಾಡಿ.. ಅಪಾಯ ತಪ್ಪಿಸಿ
If you have a health insurance policy, renew it on time.. avoid risk

By

Published : Aug 2, 2022, 2:07 PM IST

ಹೈದರಾಬಾದ್: ಅನಾರೋಗ್ಯದ ಸಂದರ್ಭದಲ್ಲಿ ಎದುರಾಗಬಹುದಾದ ಆರ್ಥಿಕ ಸಂಕಷ್ಟದಿಂದ ಆರೋಗ್ಯ ವಿಮೆ ನಿಮ್ಮನ್ನು ರಕ್ಷಿಸುತ್ತದೆ. ಆದರೆ, ಕೆಲವೊಮ್ಮೆ ವಿಮಾ ಕಂಪನಿಯು ನಿಮ್ಮ ಕ್ಲೇಮ್ ಅನ್ನು ತಿರಸ್ಕರಿಸಿದರೆ ಮಾತ್ರ ಸಂಕಷ್ಟ ತಪ್ಪಿದ್ದಲ್ಲ. ಹಾಗಾದರೆ ಯಾವೆಲ್ಲ ಪರಿಸ್ಥಿತಿಗಳಲ್ಲಿ ಕ್ಲೇಮ್ ತಿರಸ್ಕಾರವಾಗಬಹುದು? ಹೀಗಾಗದಂತೆ ತಪ್ಪಿಸಲು ಏನು ಮಾಡಬಹುದು? .. ಬನ್ನಿ ಇದರ ಬಗ್ಗೆ ತಿಳಿಯೋಣ.

ಆರೋಗ್ಯ ವಿಮಾ ಪಾಲಿಸಿಯು ಚಾಲ್ತಿಯಲ್ಲಿರುವಾಗ ವಿಮಾ ಕಂಪನಿಯು ನಿಮ್ಮ ಕ್ಲೇಮ್​ಗಳನ್ನು ಅನುಮೋದಿಸುತ್ತದೆ. ಇದಕ್ಕಾಗಿ ಪಾಲಿಸಿಯನ್ನು ಪ್ರತಿ ವರ್ಷ ನವೀಕರಿಸುವುದು ಅಗತ್ಯ. ಆದರೆ, ಕೆಲವೊಮ್ಮೆ ಪಾಲಿಸಿದಾರರು ಪಾಲಿಸಿ ನವೀಕರಿಸಲು ವಿಳಂಬ ಮಾಡುತ್ತಾರೆ ಅಥವಾ ಮರೆತು ಬಿಡುತ್ತಾರೆ. ಅಂತಹ ಸಂದರ್ಭದಲ್ಲಿ, ವಿಮಾ ಕಂಪನಿಯಿಂದ ಯಾವುದೇ ಪರಿಹಾರ ಪಡೆಯಲು ಸಾಧ್ಯವಿಲ್ಲ.

ಹೆಚ್ಚಿನ ಜನರಿಗೆ ಈ ವಿಷಯ ಕ್ಲೇಮ್ ಮಾಡುವ ಸಮಯದಲ್ಲಿಯೇ ಗಮನಕ್ಕೆ ಬರುತ್ತದೆ. ವಿಮಾ ಕಂಪನಿಯಿಂದ ತಮಗೆ ಯಾವುದೇ ಕ್ಲೇಮ್ ಸಿಗಲಾರದು ಎಂದು ತಿಳಿದು ಕಂಗಾಲಾಗುತ್ತಾರೆ. ಇಂತಹ ಪರಿಸ್ಥಿತಿ ಎದುರಾಗದಂತೆ ತಪ್ಪಿಸಲು ಮುಕ್ತಾಯ ದಿನಾಂಕದ ಮೊದಲು ಪಾಲಿಸಿ ನವೀಕರಿಸುವುದು ಉತ್ತಮ.

ಸಾಮಾನ್ಯವಾಗಿ, ಆರೋಗ್ಯ ವಿಮಾ ಪಾಲಿಸಿಯ ಅವಧಿ ಮುಗಿದ ನಂತರ ನವೀಕರಣಕ್ಕಾಗಿ 15 ರಿಂದ 30 ದಿನಗಳ ಹೆಚ್ಚುವರಿ ಅವಧಿಯನ್ನು ನೀಡಲಾಗುತ್ತದೆ. ಆದರೆ, ಈ ಹೆಚ್ಚುವರಿ ಅವಧಿಯೊಳಗೆ ಕ್ಲೇಮ್ ಸಲ್ಲಿಸಿದರೂ ಪರಿಹಾರ ಮಾತ್ರ ದೊರೆಯುವುದಿಲ್ಲ. ಪಾಲಿಸಿಯನ್ನು ಚಾಲ್ತಿಯಲ್ಲಿಡಲು ಮಾತ್ರ ಇದು ಸಹಾಯಕವಾಗುತ್ತದೆ.

ಪ್ರಾಮಾಣಿಕವಾಗಿ ಮಾಹಿತಿ ನೀಡಿ:ಪಾಲಿಸಿಯನ್ನು ತೆಗೆದುಕೊಳ್ಳುವಾಗ ನಿಮಗೆ ಈಗಾಗಲೇ ಯಾವುದಾದರೂ ರೋಗಗಳಿದ್ದರೆ ಅವುಗಳ ಬಗ್ಗೆ ಅರ್ಜಿ ನಮೂನೆಯಲ್ಲಿ ನಮೂದಿಸಬೇಕು. ವಿಶೇಷವಾಗಿ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಮಧುಮೇಹದಂತಹ ವಿಷಯಗಳನ್ನು ಉಲ್ಲೇಖಿಸಬೇಕು. ಈ ಹಿಂದೆ ಯಾವುದೇ ದೊಡ್ಡ ಶಸ್ತ್ರಚಿಕಿತ್ಸೆ ಮಾಡಿದ್ದರೆ ಆ ವಿವರಗಳನ್ನೂ ನಮೂದಿಸಬೇಕು.

ಪಾಲಿಸಿಯ ನವೀಕರಣದ ಸಮಯದಲ್ಲಿ, ಪಾಲಿಸಿ ವರ್ಷದಲ್ಲಿ ಯಾವುದೇ ಅನಾರೋಗ್ಯ ಉಂಟಾದರೆ, ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂಥ ವಿಷಯಗಳನ್ನು ವಿಮಾ ಕಂಪನಿಗೆ ತಿಳಿಸಬೇಕು. ಆರೋಗ್ಯ ವಿಮೆಯ ವಿಷಯದಲ್ಲಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳೂ ಬಹಳ ಮುಖ್ಯವಾಗುತ್ತವೆ.

ಮಾಹಿತಿಯಲ್ಲಿ ಸಣ್ಣಪುಟ್ಟ ತಪ್ಪುಗಳಿದ್ದರೂ ವಿಮಾ ಕಂಪನಿ ಅದನ್ನೇ ಮುಂದೆ ಮಾಡಿ ನಿಮ್ಮ ಕ್ಲೇಮ್ ತಿರಸ್ಕರಿಸಬಹುದು. ಇನ್ನು, ಪೂರ್ವ ಅಸ್ತಿತ್ವದಲ್ಲಿರುವ ರೋಗಗಳಿಗೆ ಶಾಶ್ವತ ವಿನಾಯಿತಿ ನೀಡುವ ಮೂಲಕ ಪಾಲಿಸಿಯನ್ನು ಕೂಡ ನೀವು ಪಡೆಯಬಹುದು. ಕೆಲವೊಮ್ಮೆ ಈ ವಿಷಯವೇ ಪಾಲಿಸಿಯ ಮುಖ್ಯ ಅಂಶವಾಗಿರುತ್ತದೆ.

ಕಾಯುವಿಕೆಯ ಅವಧಿ:ವಿಮಾ ಪಾಲಿಸಿಯನ್ನು ತೆಗೆದುಕೊಂಡ ನಂತರ ಕೆಲವು ರೋಗಗಳಿಗೆ ನಿಗದಿತ ಕಾಯುವ ಅವಧಿ ಇರುತ್ತದೆ. ಇದಕ್ಕೂ ಮೊದಲು ಆ ರೋಗಗಳ ಚಿಕಿತ್ಸೆಗಾಗಿ ಕ್ಲೇಮ್ ಸ್ವೀಕರಿಸಲಾಗುವುದಿಲ್ಲ. ವಿಮಾದಾರರನ್ನು ಅವಲಂಬಿಸಿ, ಈ ಕಾಯುವ ಅವಧಿಯು ಬದಲಾಗುತ್ತದೆ. ಪಾಲಿಸಿಯನ್ನು ತೆಗೆದುಕೊಳ್ಳುವಾಗ ಈ ನಿಬಂಧನೆಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಯಾವ ರೋಗಗಳಿಗೆ ಮತ್ತು ಎಷ್ಟು ಸಮಯದವರೆಗೆ ಪರಿಹಾರವನ್ನು ನೀಡಲಾಗುವುದಿಲ್ಲ ಎಂಬುದನ್ನು ಪಾಲಿಸಿ ದಾಖಲೆಯಲ್ಲಿ ನಿರ್ದಿಷ್ಟವಾಗಿ ನಮೂದಿಸಲಾಗಿರುತ್ತದೆ. ಅದನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಬೇಕು.

ಕೆಲ ನಿರ್ದಿಷ್ಟ ರೋಗಗಳ ಚಿಕಿತ್ಸೆ:ಕೆಲವು ಕಾಯಿಲೆಗಳ ಚಿಕಿತ್ಸೆಯು ವಿಮಾ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ವಿಮಾ ಕಂಪನಿಯು ಮುಂಚಿತವಾಗಿಯೇ ತಿಳಿಸಿರುತ್ತದೆ. ಅಂದರೆ, ಈ ರೋಗಗಳ ಚಿಕಿತ್ಸೆಗೆ ಕ್ಲೇಮ್ ನೀಡಲಾಗುವುದಿಲ್ಲ. ಪಾಲಿಸಿ ತೆಗೆದುಕೊಳ್ಳುವ ಮೊದಲು ಈ ಪಟ್ಟಿಯನ್ನು ಪರಿಶೀಲಿಸಿ. ಸಿಕ್ಕಾಪಟ್ಟೆ ರೋಗಗಳಿಗೆ ಕ್ಲೇಮ್ ನೀಡಲಾಗುವುದಿಲ್ಲ ಎಂದಿದ್ದರೆ ಅಂಥ ಪಾಲಿಸಿ ಖರೀದಿಸುವ ಮುನ್ನ ಆಲೋಚನೆ ಮಾಡಿ.

ಸೂಕ್ತ ದಾಖಲೆಗಳನ್ನು ಸಲ್ಲಿಸಿ:ಕ್ಲೇಮ್​ಗಳ ಸಂದರ್ಭದಲ್ಲಿ, ವಿಶೇಷವಾಗಿ ವೈದ್ಯಕೀಯ ವೆಚ್ಚಗಳ ಮರುಪಾವತಿಗೆ ಅರ್ಜಿ ಸಲ್ಲಿಸುವಾಗ ವಿಮಾ ಕಂಪನಿಯು ವಿವಿಧ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸುತ್ತದೆ. ಇದು ಡಿಸ್ಚಾರ್ಜ್ ಸಮರಿ ಮತ್ತು ಇತರ ಬಿಲ್‌ಗಳ ಮೂಲ ದಾಖಲೆಗಳನ್ನು ಒಳಗೊಂಡಿರುತ್ತದೆ.

ಆದರೆ, ಸಾಮಾನ್ಯವಾಗಿ ಈ ದಾಖಲೆಗಳ ಜೆರಾಕ್ಸ್​ ಕಾಪಿಗಳನ್ನು ಸ್ವೀಕರಿಸಲಾಗುವುದಿಲ್ಲ. ಪಾಲಿಸಿ ಕ್ಲೇಮ್ ತಿರಸ್ಕಾರವಾಗದಂತೆ ತಪ್ಪಿಸಲು ವಿಮಾ ಕಂಪನಿಯ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಇದು ಅನಾರೋಗ್ಯದ ಸಮಯದಲ್ಲಿ ಆರ್ಥಿಕ ಮುಗ್ಗಟ್ಟಿನ ಸಮಸ್ಯೆ ಎದುರಾಗದಂತೆ ತಡೆಯುತ್ತದೆ.

ಗಡುವು ಮುಗಿದರೆ:ಪಾಲಿಸಿದಾರನು ನಿಗದಿತ ಅವಧಿಯೊಳಗೆ ಕ್ಲೇಮ್​ಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 60-90 ದಿನಗಳ ಒಳಗಾಗಿ ಸಂಬಂಧಿಸಿದ ಹಕ್ಕು ದಾಖಲೆಗಳನ್ನು ವಿಮಾ ಕಂಪನಿಗೆ ಒದಗಿಸಬೇಕು.

ABOUT THE AUTHOR

...view details