ಅಮರಾವತಿ: ಖಾಸಗಿ ಶಾಲೆಗಳಲ್ಲಿನ ಶೇ 25 ರಷ್ಟು ಪ್ರಥಮ ದರ್ಜೆಯ ಸೀಟುಗಳನ್ನು ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ಟಿಇ) ಉಚಿತವಾಗಿ ತುಂಬಿಕೊಳ್ಳಲು ವಿಫಲವಾದ ಆಂಧ್ರ ಪ್ರದೇಶ ಸರ್ಕಾರದ ನಡೆಗೆ ಹೈಕೋರ್ಟ್ ಆಕ್ಷೇಪಿಸಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರ್ಟಿಇ ಸೀಟುಗಳನ್ನು ತುಂಬಿಕೊಳ್ಳುವಂತೆ ಖಾಸಗಿ ಶಾಲೆಗಳಿಗೆ ಕಡ್ಡಾಯಗೊಳಿಸದ ಸರ್ಕಾರ, ಆ ಶಾಲೆಗಳಿಗೆ ಪರೋಕ್ಷವಾಗಿ ಲಾಭ ಮಾಡಿಕೊಡುತ್ತಿದೆ ಎಂದು ಕೋರ್ಟ್ ಹೇಳಿದೆ. ಬಡ ವಿದ್ಯಾರ್ಥಿಗಳ ಜೀವನೊಂದಿಗೆ ಯಾಕೆ ಆಟವಾಡುತ್ತಿರುವಿರಿ ಎಂದು ಪ್ರಶ್ನಿಸಿರುವ ಕೋರ್ಟ್, ಕಾಯ್ದೆಯನ್ನು ಕೇವಲ ಮಾತಿನಲ್ಲಿ ಅಲ್ಲದೆ ಕೃತಿಯಲ್ಲಿ ಜಾರಿ ಮಾಡುವಂತೆ ತಾಕೀತು ಮಾಡಿದೆ.
25ರಷ್ಟು ಸೀಟುಗಳನ್ನು ಭರ್ತಿ ಮಾಡಿದ ಪುರಾವೆ ತೋರಿಸದಿದ್ದಲ್ಲಿ ಅಧಿಕಾರಿಗಳಿಗೆ ಜೈಲು ಸೀಟು ಹಂಚಿಕೆ ಮಾಡುವುದಾಗಿ ನ್ಯಾಯಾಲಯ ನಿಂದನೆ ಪ್ರಕರಣದ ಪ್ರತಿವಾದಿಗಳಾದ ಮುಖ್ಯ ಕಾರ್ಯದರ್ಶಿ (ಸಿಎಸ್), ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಮಕ್ಕಳು ಶಾಲೆಗೆ ಸೇರಬೇಕು. ಇಲ್ಲವಾದರೆ ನೀವು ಜೈಲಿನಲ್ಲಿರಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಆರ್ಟಿಇ ಅಡಿಯಲ್ಲಿ ಶಾಲೆಗಳಿಗೆ ಎಷ್ಟು ಮಕ್ಕಳು ಪ್ರವೇಶ ಪಡೆದಿದ್ದಾರೆ ಎಂಬ ವಿವರವನ್ನು ಹಾಜರುಪಡಿಸಬೇಕು. ನೀಡಿದ ವಿವರಗಳು ತೃಪ್ತಿಕರವಾಗಿಲ್ಲದಿದ್ದರೆ, ವೈಯಕ್ತಿಕ ಹಾಜರಾತಿಗೆ ಆದೇಶಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಕುರಿತು ವಿವರ ಸಲ್ಲಿಸಲು ನ್ಯಾಯಾಲಯ ವಿಚಾರಣೆಯನ್ನು ಇದೇ ತಿಂಗಳ 7ಕ್ಕೆ ಮುಂದೂಡಿದೆ.