ತಲರಿ ಚೆರುವು (ಆಂಧ್ರ ಪ್ರದೇಶ): ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿಯೂ ಇಲ್ಲೊಂದು ಗ್ರಾಮದ ಜನತೆ ಹಳೆಯ ಸಂಪ್ರದಾಯಗಳನ್ನು ಬಿಟ್ಟಿಲ್ಲ. ಮಾಘ ಮಾಸದ ಹುಣ್ಣಿಮೆಯ ಹಿಂದಿನ ದಿನ ಊರಲ್ಲಿರುವುದು ಅಶುಭವೆಂದು ಈ ಗ್ರಾಮಸ್ಥರು ಪರಿಗಣಿಸುತ್ತಾರೆ. ಹಿಂದೆ ಎಂದೋ ನಡೆದ ಅಹಿತಕರ ಘಟನೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಇಡೀ ದಿನ ಊರು ಬಿಡುವುದು ವಾಡಿಕೆಯಾಗುತ್ತಿದೆ. ಗ್ರಾಮಸ್ಥರೆಲ್ಲ ಆ ದಿನ ಊರು ಬಿಟ್ಟು ಕಾಡಿಗೆ ಹೋಗುತ್ತಾರೆ. ಆ ಊರು ಯಾವುದು? ಆ ಸಂಪ್ರದಾಯವೇನು? ಇದರ ಹಿಂದಿನ ಕಥೆಯನ್ನು ತಿಳಿಯೋಣ.
ಭರವಸೆಯೊಂದಿದ್ದರೆ ಕ್ಯಾನ್ಸರ್ ರೋಗಿ ಕೂಡ ರೋಗದಿಂದ ವಾಸಿಯಾಗಿ ಬದುಕುಳಿಯಬಲ್ಲ ಎಂದು ಹೇಳಲಾಗುತ್ತದೆ. ಇದು ಸತ್ಯವೂ ಹೌದು. ಅದೇ ರೀತಿಯಾಗಿ ಇಲ್ಲಿನ ಅಗ್ಗಿಪಡು ಸಂಪ್ರದಾಯವು ಗ್ರಾಮ ಹಾಗೂ ಗ್ರಾಮಸ್ಥರನ್ನು ಕಳೆದ ಹಲವಾರು ವರ್ಷಗಳಿಂದ ಅಪಶಕುನಗಳಿಂದ ಸಂರಕ್ಷಿಸುತ್ತಿದೆ ಎಂದು ನಂಬಲಾಗಿದೆ. ಈ ಗ್ರಾಮದ ಹೆಸರು ತಲರಿ ಚೆರುವು. ಇದು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯಲ್ಲಿದೆ. ಇಲ್ಲಿ ಪಾಲಿಸಲಾಗುತ್ತಿರುವ ವಿಶೇಷ ಸಂಪ್ರದಾಯ ಬಹಳ ಕುತೂಹಲಕರವಾಗಿದೆ.
ಸಾಕು ಪ್ರಾಣಿಗಳ ಸಮೇತ ಊರು ಬಿಡುವ ಜನ:ಗ್ರಾಮದ ಹಾಗೂ ಗ್ರಾಮಸ್ಥರ ಒಳಿತಿಗಾಗಿ ವಿಲಕ್ಷಣ ನಂಬಿಕೆಯನ್ನು ಆಚರಣೆಯಂತೆ ಅನುಸರಿಸಿ ಇವರು ತಮ್ಮ ಅನನ್ಯತೆಯನ್ನು ತೋರಿಸುತ್ತಿದ್ದಾರೆ. ಮಾಘ ಮಾಸದ ಹುಣ್ಣಿಮೆಯ ಹಿಂದಿನ ದಿನ ಊರಿನವರೆಲ್ಲರೂ ಸಾಕು ಪ್ರಾಣಿಗಳ ಸಮೇತ ಊರು ಬಿಡುತ್ತಾರೆ. ಅಗ್ಗಿಪಾಡು ಎಂಬ ವಿಚಿತ್ರ ಆಚರಣೆಯ ನಿಮಿತ್ತ ಗ್ರಾಮದ ಯಾವುದೇ ಮನೆಗಳಲ್ಲಿ ಅಂದು ಬೆಂಕಿ ಉರಿಸಲಾಗುವುದಿಲ್ಲ. ಎಲ್ಲ ದೀಪಗಳು ಸ್ವಿಚ್ಡ್ ಆಫ್ ಆಗುತ್ತವೆ. ಜನರೆಲ್ಲರೂ ಹತ್ತಿರದ ದರ್ಗಾಕ್ಕೆ ಹೋಗುತ್ತಾರೆ. ಹಾಗಾಗಿ ಹುಣ್ಣಿಮೆಯ ದಿನವನ್ನು ಅವರು ಹಳ್ಳಿಯಿಂದ ದೂರವೇ ಕಳೆಯುತ್ತಾರೆ.
ಈ ಆಚರಣೆಗೆ ಇದೆ ಪೌರಾಣಿಕ ಹಿನ್ನೆಲೆ:ಆ ಪದ್ಧತಿಯ ಹಿಂದೆ ಒಂದು ಕಥೆಯಿದೆ. ಒಂದಾನೊಂದು ಕಾಲದಲ್ಲಿ ಬ್ರಾಹ್ಮಣನೊಬ್ಬ ತಲರಿಚೆರುವು ಗ್ರಾಮವನ್ನು ದರೋಡೆ ಮಾಡಿದ್ದನಂತೆ ಮತ್ತು ಗ್ರಾಮಸ್ಥರೆಲ್ಲರೂ ಸೇರಿ ಅವನನ್ನು ಕೊಂದು ಹಾಕಿದ್ದರಂತೆ. ಆದರೆ, ಹಳ್ಳಿಯಲ್ಲಿ ಹುಟ್ಟಿದ ಮಕ್ಕಳು ಹುಟ್ಟಿನಿಂದಲೇ ಸಾಯುತ್ತಿರುವುದಕ್ಕೆ ಬ್ರಾಹ್ಮಣನನ್ನು ಗ್ರಾಮಸ್ಥರು ಕೊಲೆ ಮಾಡಿದ್ದೇ ಕಾರಣ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರಂತೆ. ಇದಕ್ಕೆ ಪರಿಹಾರವಾಗಿ ಮಾಘ ಚತುರ್ಥಶಿಯಿಂದ ಹುಣ್ಣಿಮೆಯ ಮಧ್ಯರಾತ್ರಿಯವರೆಗೆ ಅಗ್ಗಿಪಾಡು ಆಚರಣೆಗೆ ಸೂಚಿಸಲಾಗಿದೆ ಎಂದು ಗ್ರಾಮಸ್ಥರು ವಿವರಿಸಿದರು. ಅಂದಿನಿಂದ ಈ ಸಂಪ್ರದಾಯವನ್ನು ಪ್ರತಿ ವರ್ಷ ನಿರಂತರವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಹುಣ್ಣಿಮೆಯ ಹಿಂದಿನ ದಿನದಿಂದ ಹುಣ್ಣಿಮೆಯ ಮಧ್ಯರಾತ್ರಿಯವರೆಗೆ ನಾವು ಇಲ್ಲಿನ ಹಾಜಾವಲಿ ದರ್ಗಾಕ್ಕೆ ಬರುತ್ತೇವೆ. ಮಧ್ಯರಾತ್ರಿ ಕರೆಂಟ್ ಬಂದ್ ಮಾಡಿದರೆ ಮತ್ತೆ ಮರುದಿನ ಮಧ್ಯರಾತ್ರಿಯೇ ಆನ್ ಮಾಡುತ್ತೇವೆ. ನಾವೆಲ್ಲರೂ ಈ ದರ್ಗಾದ ಬಳಿ ಅಡುಗೆ ಮಾಡಿ ತಿನ್ನುತ್ತೇವೆ. ರಾತ್ರಿ ಮನೆಗೆ ಹೋದ ನಂತರ ಮನೆಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸುತ್ತೇವೆ. ನಂತರ ಎಂದಿನ ದಿನಚರಿಗೆ ಮರಳುತ್ತೇವೆ ಎಂದು ತಲರಿ ಚೆರುವು ಗ್ರಾಮಸ್ಥರೊಬ್ಬರು ಹೇಳಿದರು.
ಗ್ರಾಮಸ್ಥರೆಲ್ಲರೂ ತಲರಿ ಚೆರುವು ಗ್ರಾಮದ ದಕ್ಷಿಣ ಭಾಗದಲ್ಲಿರುವ ಹಾಜಾವಲಿ ದರ್ಗಾಕ್ಕೆ ತೆರಳುತ್ತಾರೆ. ಅಲ್ಲಿ ಮಕ್ಕಳು, ಜಾನುವಾರುಗಳೊಂದಿಗೆ ಆಹಾರ ಸೇವಿಸಿ ಇಡೀ ದಿನ ಕಳೆಯುತ್ತಾರೆ. ರಾತ್ರಿ ಮನೆ ತಲುಪಿದ ನಂತರ ಪೂಜೆ ನೆರವೇರಿಸಿ ಮನೆಯಲ್ಲಿ ದೀಪ ಹಚ್ಚುತ್ತಾರೆ. ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವುದರಿಂದ ಶುಭವಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಇದನ್ನೂ ಓದಿ: ದುಷ್ಟಶಕ್ತಿಗಳ ಪೀಡೆ ತೊಲಗಿಸಲು ಮರಗಳೊಂದಿಗೆ ಮದುವೆ.. ಬುಡಕಟ್ಟು ಜನರ ವಿಶಿಷ್ಟ ಆಚರಣೆ!