ನವದೆಹಲಿ:ಕೋವಿಡ್-19 ನಡುವೆಯೂ 12ನೇ ತರಗತಿ ಪರೀಕ್ಷೆಗೆ ಮುಂದಾಗಿರುವ ಆಂಧ್ರಪ್ರದೇಶ ಹಾಗೂ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಈ ಪರೀಕ್ಷೆಯಿಂದ ಯಾವುದೇ ಸಾವು ವರದಿಯಾದರೂ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದ್ದು, ಈ ಸಂಬಂಧ 2 ದಿನದಲ್ಲಿ ಅಂತಿಮ ನಿರ್ಧಾರ ತಿಳಿಸುವಂತೆ ಸೂಚಿಸಿತು.
ಪರೀಕ್ಷೆ ನಡೆಸುವ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಂ.ಖಾನ್ವಿಲ್ಕರ್ ಮತ್ತು ನ್ಯಾ.ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠ, 'ನೀವು ಎಲ್ಲವನ್ನೂ ಅನಿಶ್ಚಿತ ಸ್ಥಿತಿಯಲ್ಲಿಡಲು ಸಾಧ್ಯವಿಲ್ಲ. ಪರೀಕ್ಷೆಗಳನ್ನು ನಡೆಸುವ ಬಗ್ಗೆ ಇನ್ನೂ ಏಕೆ ಅಫಿಡವಿಟ್ ಸಲ್ಲಿಸಿಲ್ಲ ಎಂದು ಕೇಳಿದರು.
ದೇಶದ ಎಲ್ಲ ರಾಜ್ಯಗಳು ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದ್ದರೂ ನೀವೇಕೆ ಪರೀಕ್ಷೆ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಇದೇ ವೇಳೆ ಆಂಧ್ರ ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟತೆ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.