ನವದೆಹಲಿ: ಬೀದಿನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳುವಾಗ ಸುಪ್ರೀಂಕೋರ್ಟ್ ಮಹತ್ವದ ನಿರ್ಣಯಕ್ಕೆ ಬಂದಿದೆ. ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದ್ರೆ ಅದಕ್ಕೆ ಹಾಕುವ ಲಸಿಕೆ ಮತ್ತು ತಗಲುವ ಚಿಕಿತ್ಸೆ ವೆಚ್ಚ ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವವರೇ ಭರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆಕೆ ಮಹೇಶ್ವರಿ ಅವರ ಪೀಠವು ಕೇರಳದಲ್ಲಿ ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಈ ನಿರ್ಣಯಕ್ಕೆ ಬಂದಿತು. ಅನೇಕರು ಶ್ವಾನ ಪ್ರಿಯರಾಗಿದ್ದಾರೆ. ಬೀದಿನಾಯಿಗಳಿಗೆ ಆಹಾರ ಹಾಕುತ್ತಾರೆ. ತಾವು ಆಹಾರ ಹಾಕುವ ನಾಯಿಯ ಮೇಲೆ ಸಂಖ್ಯೆ ಅಥವಾ ಗುರುತು ಹಾಕಬೇಕು. ಆ ನಾಯಿಗಳು ಬೇರೆ ವ್ಯಕ್ತಿಯ ಮೇಲೆ ದಾಳಿ ಮಾಡಿದ್ರೆ ಅವರಿಗೆ ಲಸಿಕೆ ಹಾಕುವ ಹಾಗೂ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಶ್ವಾನಕ್ಕೆ ಆಹಾರ ನೀಡುವವರೇ ಭರಿಸಬೇಕೆಂದು ನ್ಯಾಯಮೂರ್ತಿ ಸಂಜೀವ ಖನ್ನಾ ಹೇಳಿದ್ದಾರೆ.
ಬೀದಿ ನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ. ಅವುಗಳಿಗೆ ಆಹಾರ ನೀಡುವ ಜನರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಅದೇ ರೀತಿ ಬೀದಿ ನಾಯಿಗಳ ದಾಳಿಯಿಂದ ಅಮಾಯಕ ಜನರನ್ನು ರಕ್ಷಿಸುವ ಅಗತ್ಯವೂ ಇದೆ ಎಂದು ಒತ್ತಿ ಹೇಳಿದ ಪೀಠ ರೇಬಿಸ್ ಸೋಂಕಿತ ನಾಯಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಆರೈಕೆ ಕೇಂದ್ರದಲ್ಲಿ ಇರಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.