ಉದಯಪುರ (ರಾಜಸ್ಥಾನ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾದರೆ ಭ್ರಷ್ಟಾಚಾರ ಹಾಗೂ ಹಗರಣಗಳೇ ದೇಶಕ್ಕೆ ಗತಿ. ಪ್ರಧಾನಿ ನರೇಂದ್ರ ಮೋದಿ ಪುನರಾಯ್ಕೆಯಾದರೆ ವಂಚಕರು ಕಂಬಿ ಹಿಂದೆ ಬೀಳುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ರಾಜಸ್ಥಾನದ ಉದಯಪುರದಲ್ಲಿ ಶುಕ್ರವಾರ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ ಒಂಬತ್ತು ವರ್ಷಗಳಲ್ಲಿ ಸಾಧನೆಗಳ ಕುರಿತ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗೆ ಪಾಟ್ನಾದಲ್ಲಿ ಸಭೆ ಸೇರಿದ್ದ ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜನರಿಗೆ ಒಳ್ಳೆಯದನ್ನು ಮಾಡಲು ಅವರು ಬಯಸುವುದಿಲ್ಲ. ಅವರಿಗೆ ತಮ್ಮ ಪುತ್ರರ ಭವಿಷ್ಯವೇ ಮುಖ್ಯ ಎಂದು ಟೀಕಾ ಪ್ರಹಾರ ನಡೆಸಿದರು.
ಸೋನಿಯಾ ಗಾಂಧಿಯವರ ಗುರಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡುವುದಾಗಿದೆ. ಅದೇ ರೀತಿಯಾಗಿ ಲಾಲು ಯಾದವ್ ಅವರಿಗೂ ತನ್ನ ಮಗ ತೇಜಸ್ವಿ ಯಾದವ್ ಅವರನ್ನು ಪ್ರಧಾನಿ ಮಾಡುವ ಬಯಕೆ ಇದೆ. ಮಮತಾ ಬ್ಯಾನರ್ಜಿ ತಮ್ಮ ಸೋದರಳಿಯ ಅಭಿಷೇಕ್ ಅವರನ್ನು ಮುಖ್ಯಮಂತ್ರಿ ಮಾಡುವುದು ಮತ್ತು ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಭವಿಷ್ಯದ ಚಿಂತೆ ಇದೆ. ರಾಹುಲ್ ಗಾಂಧಿ ಪ್ರಧಾನಿಯಾದರೆ ಹಗರಣಗಳು ಹಾಗೂ ಭ್ರಷ್ಟಾಚಾರವೇ ದೇಶದ ಹಣೆಬರಹವಾಗಲಿದೆ ಎಂದು ಕುಟುಕಿದರು.
ಪ್ರಧಾನಿ ಮೋದಿ ಮತ್ತೊಮ್ಮೆ ಆಯ್ಕೆಯಾದರೆ ವಂಚಕರು ಕಂಬಿ ಎಣಿಸಬೇಕಾಗುತ್ತದೆ. ಅವರ ನೇತೃತ್ವದ ಸರ್ಕಾರಕ್ಕೆ ಒಂಬತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಕೃತಜ್ಞತಾ ಯಾತ್ರೆಗಳನ್ನು ಆರಂಭಿಸಿದೆ. ನಾನು ದೇಶಾದ್ಯಂತ ಪ್ರವಾಸ ಮಾಡಿದ್ದೇನೆ. ಎಲ್ಲೆಡೆ ಸಿಗುತ್ತಿರುವ ಬೆಂಬಲದಿಂದ ಮೋದಿ 300 ಸ್ಥಾನಗಳೊಂದಿಗೆ ಪ್ರಧಾನಿಯಾಗುವುದು ಖಚಿತವಾಗಿದೆ ಎಂದು ಅವರು ಹೇಳಿದರು.
ಇಡೀ ವಿಶ್ವದಲ್ಲಿ ಮೋದಿಗೆ ಸಿಗುತ್ತಿರುವ ಗೌರವ ಮೋದಿ ಅಥವಾ ಬಿಜೆಪಿಗಲ್ಲ. ಅದು ದೇಶದ 130 ಕೋಟಿ ಜನರ ಗೌರವ. 2014ರ ಮೊದಲು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಆಲಿಯಾ-ಮಾಲಿಯಾ-ಜಮಾಲಿಯಾ (ಭಯೋತ್ಪಾದಕರು) ಭಾರತಕ್ಕೆ ನುಗ್ಗಿ ಸ್ಫೋಟದಂತಹ ಕೃತ್ಯಗಳನ್ನು ಮಾಡಿದ್ದರು. ಆದರೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೂ ಪಾಕಿಸ್ತಾನ ಉರಿ ಮತ್ತು ಪುಲ್ವಾಮಾದಲ್ಲಿ ತಪ್ಪುಗಳನ್ನು ಮಾಡಿತ್ತು. ಮೋದಿ ಸರ್ಕಾರ ಹತ್ತು ದಿನಗಳಲ್ಲೇ ಏರ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ಕಾರ್ಯಗತಗೊಳಿಸಿ ಪಾಕಿಸ್ತಾನದ ಭಯೋತ್ಪಾದಕರನ್ನು ಹೊಡೆದುರುಳಿತು ಎಂದು ಅಮಿತ್ ಶಾ ತಿಳಿಸಿದರು.