ಮುಂಬೈ (ಮಹಾರಾಷ್ಟ್ರ):ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾರಾಣಸಿಯಿಂದ ಸ್ಪರ್ಧಿಸಿದರೆ ಖಂಡಿತ ಗೆಲ್ಲುತ್ತಾರೆ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವತ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು "ಭಾರತದಲ್ಲಿ ರಾಜಕೀಯ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ ಮತ್ತು ಕಾಂಗ್ರೆಸ್ ಈಗೀಗ ಜನರಿಂದ ಭಾರಿ ಬೆಂಬಲ ಪಡೆಯುತ್ತಿದೆ. ವಾರಾಣಸಿಯ ಜನರು ಪ್ರಿಯಾಂಕಾ ಗಾಂಧಿ ಅವರನ್ನು ಬಯಸುತ್ತಾರೆ. ರಾಯ್ ಬರೇಲಿ, ವಾರಾಣಸಿ ಮತ್ತು ಅಮೇಥಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಕಠಿಣವಾಗಿದೆ. ಜನರು ರಾಹುಲ್ ಗಾಂಧಿ ಜೊತೆ ನಿಲ್ಲಬೇಕು. ಒಂದು ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದರೆ ಖಂಡಿತವಾಗಿಯೂ ಆಘಾತಕಾರಿ ಫಲಿತಾಂಶಗಳು ಬರುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಸಂಜಯ್ ರಾವತ್ ಹೇಳಿದರು. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಶಿವಸೇನೆ (ಯುಬಿಟಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ರಾವತ್ ಈ ಹೇಳಿಕೆ ನೀಡಿದ್ದಾರೆ.
ಶರದ್ ಪವಾರ್ ಮತ್ತು ಅಜಿತ್ ಪವಾರ್ ಏಕೆ ಭೇಟಿಯಾಗಬಾರದು?: ಮಹಾರಾಷ್ಟ್ರ ರಾಜಕೀಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಸಂಜಯ್ ರಾವತ್ "ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಾಧ್ಯವಾದರೆ, ಶರದ್ ಪವಾರ್ ಮತ್ತು ಅಜಿತ್ ಪವಾರ್ ಏಕೆ ಭೇಟಿಯಾಗಬಾರದು"? ಎಂದು ಪ್ರಶ್ನಿಸಿದರು.
ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿಯ ಊಹಾಪೋಹಗಳ ಬಗ್ಗೆ ಮಾತನಾಡಿದ ಸಂಜಯ್ ರಾವತ್, ನಿನ್ನೆ ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿಯಾದ ವಿಚಾರ ಮಾಧ್ಯಮಗಳಿಂದ ನಮಗೆ ತಿಳಿಯಿತು. ಶರದ್ ಪವಾರ್ ಶೀಘ್ರದಲ್ಲೇ ಈ ಬಗ್ಗೆ ಮಾತನಾಡುತ್ತಾರೆ. ಶರದ್ ಪವಾರ್ ಅವರು ಅಜಿತ್ ಪವಾರ್ ಅವರನ್ನು 'ಇಂಡಿಯಾ ಬ್ಲಾಕ್' ಸಭೆಗೆ ಆಹ್ವಾನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಮಹಾರಾಷ್ಟ್ರದ ಇಬ್ಬರೂ ಉಪ ಮುಖ್ಯಮಂತ್ರಿಗಳು ಈ ಪ್ರಸ್ತುತ ಸರ್ಕಾರದ ಬಗ್ಗೆ ಅಸಮಧಾನಗೊಂಡಿದ್ದಾರೆ. 'ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಜಿತ್ ಪವಾರ್, ದೇವೇಂದ್ರ ಫಡ್ನವಿಸ್ ಮತ್ತು ಮಹಾರಾಷ್ಟ್ರದ ಜನರು ಈ ಪ್ರಸ್ತುತ ಸರ್ಕಾರದಿಂದ ಸಂತೋಷವಾಗಿಲ್ಲ' ಎಂದು ಅವರು ಹೇಳಿದರು.