ಇಂದೋರ್(ಮಧ್ಯಪ್ರದೇಶ): ಪರಿಶಿಷ್ಟ ಬುಡಕಟ್ಟು ಮಹಿಳೆಯರ ಭೂಮಿ ಕಸಿಯುವ ಉದ್ಧೇಶದಿಂದ ಮದುವೆಯಾಗುತ್ತಿರುವ ವಿರುದ್ಧ ಅಗತ್ಯ ಬಿದ್ದರೆ ಕಠಿಣ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಈಗಾಗಲೇ ಲವ್ ಜಿಹಾದ್ ವಿರುದ್ಧ ರಾಜ್ಯದಲ್ಲಿ ನಿಯಮ ರೂಪಿಸಲಾಗಿದ್ದು, ಅಗತ್ಯ ಬಿದ್ದರೆ ಇದನ್ನು ಇನ್ನಷ್ಟು ಕಠಿಣಗೊಳಿಸಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2021ನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬಲವಂತವಾಗಿ, ಪ್ರಭಾವ, ಬಲವಂತ, ಆಮಿಷ, ಅಥವಾ ಮದುವೆಯ ಭರವಸೆ ಸೇರಿದಂತೆ ಇತರೆ ಮೋಸದ ವಿಧಾನ ಬಳಸಿ ಧಾರ್ಮಿಕವಾಗಿ ಮತಾಂತರ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಕಠಿಣ ಸಂದೇಶ ರವಾನಿಸಿದರು.
ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ತಾಂತ್ಯ ಭಿಲ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ನೆರೆದಿದ್ದ ಬುಡಕಟ್ಟು ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಅಗತ್ಯ ಬಿದ್ದರೆ ಲವ್ ಜಿಹಾನ್ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಇದರಿಂದಾಗಿ ಯಾವುದೇ ಅಪರಾಧಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವರು ಬುಡಕಟ್ಟು ಮಹಿಳೆಯರ ಆಸ್ತಿ ಕಬಳಿಕೆ ಉದ್ದೇಶದಿಂದ ಅವರನ್ನು ಮದುವೆಯಾಗುತ್ತಿರುವುದು ಕಂಡು ಬಂದಿದೆ. ಸ್ವಾತಂತ್ರ್ಯದ ಹಕ್ಕಿನ ನಿಯಮವನ್ನು ಕಠಿಣಗೊಳಿಸಿ, ಭೂಮಿ ಕಬಳಿಕೆಗಾಗಿ ಮದುವೆಯಾಗಿರುವ ಪ್ರಕರಣಗಳನ್ನು ಪರಿಶೀಲನೆ ನಡೆಸಲಾಗುವುದು. ಇದು ಭೂಮಿ ಕಬಳಿಕೆಗೆ ನಡೆಸುವ ಲವ್ ಜಿಹಾದ್ ಅನ್ನು ನಿಲ್ಲಿಸಲಿದೆ ಎಂದರು.