ನವದೆಹಲಿ: ದೆಹಲಿಯಲ್ಲಿ ದಿನದಿಂದ ದಿನಕ್ಕೆ ಆಮ್ಲಜನಕದ ಕೊರತೆ ಎದುರಾಗುತ್ತಿದ್ದು, ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಸಿಗದೇ ಮೃತಪಡುತ್ತಿದ್ದಾರೆ. ಇದರ ನಡುವೆ ಕೆಲ ಅಧಿಕಾರಿಗಳು ಮತ್ತು ನೌಕರರು ಆಕ್ಸಿಜನ್ ಸರಬರಾಜಿಗೆ ಅಡ್ಡಿಪಡಿಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಇಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತದ ಯಾವುದೇ ಅಧಿಕಾರಿಯು ಆಮ್ಲಜನಕವನ್ನು ನೀಡುವಲ್ಲಿ ಅಥವಾ ಸರಬರಾಜಿನಲ್ಲಿ ಅಡ್ಡಿಪಡಿಸುತ್ತಿದ್ದರೆ ಅಂತಹವರನ್ನು ಗಲ್ಲಿಗೇರಿಸಲಾಗುವುದೆಂದು ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಮಹಾರಾಜ ಅಗ್ರಸೇನ್ ಆಸ್ಪತ್ರೆಯಿಂದ ಗಂಭೀರವಾಗಿ ಅನಾರೋಗ್ಯಕ್ಕೊಳಗಾದ ಕೋವಿಡ್ ರೋಗಿಗಳಿಗೆ ಆಮ್ಮಜನಕದ ಕೊರತೆ ಬಗ್ಗೆ ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಈ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ಪೀಠ, ಆಮ್ಲಜನಕ ಸರಬರಾಜಿಗೆ ಅಡ್ಡಿ ಪಡಿಸುವುದರ ಬಗ್ಗೆ ಮಾಹಿತಿ ನೀಡುವಂತೆ ದೆಹಲಿ ಸರ್ಕಾರಕ್ಕೆ ತಿಳಿಸಿತು. ಅಲ್ಲದೆ, ಅಡ್ಡಿಪಡಿಸಿದವರನ್ನು ನಾವು ಗಲ್ಲಿಗೇರಿಸುತ್ತೇವೆ ಎಂದು ಪೀಠ ಎಚ್ಚರಿಕೆ ರವಾನಿಸಿತು.