ಗರಿಯಾಬಂದ್ (ಛತ್ತೀಸ್ಗಢ):ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ಬಡೇ ಗೋಬ್ರಾ ಗ್ರಾಮದಲ್ಲಿ ನಕ್ಸಲೀಯರು ಐಇಡಿ ಸ್ಫೋಟಗೊಳಿಸಿದ್ದು, ಇದರಲ್ಲಿ ಇಂಡೋ ಟಿಬೆಟಿಯನ್ ಪೊಲೀಸ್ ಪಡೆಯ (ITBPI) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ನಡೆದಿದೆ. ಎರಡನೇ ಹಂತದ ಮತದಾನ ಮುಗಿಸಿ ಹಿಂತಿರುಗುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡ ನಕ್ಸಲೀಯರು ಐಇಡಿ ಸ್ಫೋಟ ನಡೆಸಿದ್ದಾರೆ. ಘಟನೆಯಲ್ಲಿ ಯೋಧ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಗರಿಯಾಬಂದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಪೊಲೀಸ್ ಅಧಿಕಾರಿಗಳು ಮಾಹಿತಿ: ಗರಿಯಾಬಂದ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಡೆ ಗೊಬ್ರಾ ಗ್ರಾಮದ ಮತದಾನ ಮುಗಿಸಿ ಹಿಂತಿರುಗುತ್ತಿದ್ದಾಗ ನಕ್ಸಲೀಯರು ದಾಳಿ ನಡೆಸಿದ್ದಾರೆ. ಮೃತರನ್ನು ಹೆಡ್ ಕಾನ್ಸ್ಟೇಬಲ್ ಜೋಗಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗಿದ್ದು, ತಪಾಸಣೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಹೇಳಿದರು.
ನಿನ್ನೆ ಧಮ್ತಾರಿಯಲ್ಲಿ ಸ್ಫೋಟ: ಚುನಾವಣೆಗೂ ಮುನ್ನ ಗುರುವಾರ ಧಮ್ತಾರಿಯ ಸಿಹಾವಾದಲ್ಲಿ ಐಇಡಿ ಸ್ಫೋಟ ಸಂಭವಿಸಿತ್ತು. ಇಲ್ಲಿ ಒಟ್ಟು ಎರಡು ಸ್ಫೋಟಗಳು ಸಂಭವಿಸಿವೆ. ಆದರೆ, ಎರಡೂ ಸ್ಫೋಟಗಳು ಕಡಿಮೆ ತೀವ್ರತೆ ಹೊಂದಿದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ನಂತರ ಪೊಲೀಸರು ಈ ಪ್ರದೇಶದಿಂದ ಐದು ಕೆಜಿ ಐಇಡಿಯನ್ನು ವಶಪಡಿಸಿಕೊಂಡಿದ್ದರು. ಧಮ್ತಾರಿಯ ಸಿಹಾವಾ ನಕ್ಸಲ್ ಪೀಡಿತ ಪ್ರದೇಶವಾಗಿದೆ.
ಇದನ್ನೂ ಓದಿ:ಮದುವೆಯಾಗುವುದಾಗಿ ನಂಬಿಸಿ ವಂಚನೆ ಆರೋಪ: ಸಂಸದ ಪುತ್ರನ ಮೇಲೆ ಎಫ್ಐಆರ್
ಮಧ್ಯಪ್ರದೇಶದಲ್ಲಿ ಕಲ್ಲು ತೂರಾಟ:ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಮತದಾನದ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಕಲ್ಲು ತೂರಾಟ ನಡೆದಿದೆ. ಇಲ್ಲಿಯ ದಿಮಾನಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಿರ್ಘಾನ್ ಗ್ರಾಮದಲ್ಲಿನ ಮತಗಟ್ಟೆ 147 ಮತ್ತು 148ರಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ದಿಮಾನಿ ಕ್ಷೇತ್ರದಿಂದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪರ್ಧೆ ಮಾಡುತ್ತಿದ್ದ ಹಾಟ್ಸ್ಪಾಟ್ ಆಗಿ ಗುರುತಿಸಿಕೊಂಡಿದೆ.
ಘಟನೆ ಬಗ್ಗೆ ತೋಮರ್ ಪ್ರತಿಕ್ರಿಯೆ: ಮತಚಲಾಯಿಸಲು ಆಗಮಿಸಿದ ವೇಳೆ ಮಾತನಾಡಿದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಚುನಾವಣೆ ವೇಳೆ ಹಿಂಸಾಚಾರಕ್ಕೆ ಅವಕಾಶವಿಲ್ಲ. ಆದರೆ ಕಾಂಗ್ರೆಸ್ಸಿನವರು ಸೋಲುವ ಭಯದಿಂದ ಗಲಾಟೆ ನಡೆಸಿದ್ದಾರೆ. ಇವರೊಂದಿಗೆ ಬಿಎಸ್ಪಿಯವರೂ ಶಾಮೀಲಾಗಿದ್ದಾರೆ ಎಂದು ಹೇಳಿದರು.
ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ಕಲ್ಲು ತೂರಾಟ ನಡೆದ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿ ಪರಿಸ್ಥಿತಿ ಹತೋಟಿಗೆ ತಂದು ಶಾಂತಿಯುತ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಡಿಎಸ್ಪಿ ವಿಜಯ್ ಸಿಂಗ್ ಬದೌರಿಯಾ ಅವರು ಹೇಳಿದ್ದಾರೆ. ಮುಂಜಾನೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇನ್ನು ಗುಂಡಿನ ದಾಳಿಯನ್ನು ನಡೆಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು ಇದು ದೃಢಪಟ್ಟಿಲ್ಲ ಎಂದು ಹೇಳಿದರು.
ಭಿಂಡ್ನಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ: ಭಿಂಡ್ ಜಿಲ್ಲೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆ ನಡೆದಿರುವ ಸುದ್ದಿ ಬೆಳಕಿಗೆ ಬಂದಿದೆ. ಇಲ್ಲಿನ ಮೆಹಗಾಂವ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಕೇಶ್ ಶುಕ್ಲಾ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ. ಅಲ್ಲದೇ ಮನಹರ್ ಎಂಬ ಗ್ರಾಮದಲ್ಲಿ ಕಲ್ಲು ತೂರಾಟ ನಡೆದಿದೆ. ಈ ವೇಳೆ ರಾಕೇಶ್ ಗಾಯಗೊಂಡಿದ್ದಾರೆ. ಅವರ ಕಾರಿನ ಗಾಜು ಕೂಡ ಒಡೆದಿವೆ. ಇದಲ್ಲದೇ ಇಲ್ಲಿಯೂ ಗುಂಡಿನ ದಾಳಿ ನಡೆಸಿರುವ ದೂರು ದಾಖಲಾಗಿದೆ. ಸ್ಥಳದಲ್ಲಿ ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಜೆಡಿಎಸ್ ಕಚೇರಿ ಗೋಡೆಗಳ ಮೇಲೆ ಅವಹೇಳನಕಾರಿ ಪೋಸ್ಟರ್: ಇಬ್ಬರ ವಿರುದ್ಧ FIR ದಾಖಲು