ಚೆನ್ನೈ: ತಮಿಳುನಾಡಿನ ಕುಖ್ಯಾತ ವಿಗ್ರಹ ಕಳ್ಳಸಾಗಣೆದಾರ ಶುಭಾಷ್ಚಂದ್ರ ಕಪೂರ್ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕುಂಭಕೋಣಂನಲ್ಲಿರುವ ವಿಶೇಷ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2000 ರಲ್ಲಿ ವರದರಾಜ ಪೆರುಮಾಳ್ ದೇವಸ್ಥಾನದಿಂದ 19 ಪ್ರಾಚೀನ ದೇವತೆಗಳ ಪಂಚಲೋಹದ ವಿಗ್ರಹಗಳನ್ನು ಕದ್ದ ಆರೋಪ ಅಂತಾರಾಷ್ಟ್ರೀಯ ಸ್ಲಗ್ಲರ್ ಶುಭಾಷ್ಚಂದ್ರ ಕಪೂರ್ ಮೇಲಿತ್ತು.
ಆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಪ್ರಮುಖ ಆರೋಪಿ ಕಪೂರ್ ಜೊತೆಗೆ ಅವರ ಇಬ್ಬರು ಸಹಚರರಿಗೂ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವಿಶೇಷ ನ್ಯಾಯಾಲಯವು ಕಪೂರ್ ಮತ್ತು ಇತರರಿಗೆ ತಲಾ 8,000 ರೂಪಾಯಿ ದಂಡ ಸಹ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಷಣ್ಮುಘ ಪ್ರಿಯಾ, ಅವರೆಲ್ಲರನ್ನೂ ತಪ್ಪಿತಸ್ಥರೆಂದು ಪರಿಗಣಿಸಿ ತೀರ್ಪಿತ್ತರು. ಅವರು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ನಾಶಪಡಿಸುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ?:2000ನೇ ಇಸವಿಯಲ್ಲಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದರೂ, 2008ರಲ್ಲಿ ಉದಯರಪಾಳ್ಯಂ ಪೊಲೀಸರೊಂದಿಗೆ ವಿಗ್ರಹ ಕಳ್ಳತನ ಪ್ರಕರಣ ದಾಖಲಿಸಿತ್ತು. ಕಪೂರ್ ಅಮೆರಿಕ ಪ್ರಜೆಯಾಗಿರುವುದರಿಂದ ತನಿಖೆಗೆ ಅಡ್ಡಿಯಾಗಿತ್ತು. ಕಪೂರ್ ಅಲ್ಲದೇ, ಅಪರಾಧದಲ್ಲಿ ಭಾಗಿಯಾದ ಸಂಜೀವಿ ಅಶೋಕನ್, ಮಾರಿಚಾಮಿ, ಪಕ್ಕಿಯ ಕುಮಾರ್, ಶ್ರೀರಾಮ್ ಅಲಿಯಾಸ್ ಉಲಗು ಮತ್ತು ಪಾರ್ತಿಬನ್ ಎಂಬ ಆರು ಮಂದಿಯನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.