ಚೆನ್ನೈ(ತಮಿಳುನಾಡು):ತಮಿಳುನಾಡಿನ ಕುಂಭಕೋಣಂ ದೇವಸ್ಥಾನದಿಂದ ಕಳ್ಳತನವಾಗಿದ್ದ ಸಾವಿರ ವರ್ಷಗಳಷ್ಟು ಹಳೆಯದಾದ ವಿಗ್ರಹವೊಂದು ಅಮೆರಿಕದ ನ್ಯೂಯಾರ್ಕ್ನಲ್ಲಿ ದೊರೆತಿದೆ. ಕಳೆದ 50 ವರ್ಷಗಳ ಹಿಂದೆ ಈ ಪಾರ್ವತಿ ವಿಗ್ರಹ ನಾಪತ್ತೆಯಾಗಿತ್ತು.
ಕುಂಭಕೋಣಂನ ತಂದಂತೋಟ್ಟಂನ ನಾದನಪುರೇಶ್ವರರ್ ಶಿವ ದೇವಾಲಯದಿಂದ ಪಾರ್ವತಿಯ ವಿಗ್ರಹ ನಾಪತ್ತೆಯಾಗಿತ್ತು ಎಂದು ಐಡಲ್ ವಿಂಗ್ ಸಿಐಡಿ ಡಿಜಿಪಿ ಜಯಂತ್ ಮುರಳಿ ಮಾಹಿತಿ ನೀಡಿದರು. ನ್ಯೂಯಾರ್ಕ್‌ನ ಬೋನ್‌ಹಾಮ್ಸ್ ಹರಾಜು ಹೌಸ್‌ನಲ್ಲಿ ಇದೀಗ ವಿಗ್ರಹ ಲಭ್ಯವಾಗಿದ್ದು, ಮರಳಿ ಭಾರತಕ್ಕೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು ಎಂದರು.
ವಿಗ್ರಹ ಕಳ್ಳತನವಾಗಿದ್ದರ ಬಗ್ಗೆ 1971ರಲ್ಲಿ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. 2019ರ ಫೆಬ್ರವರಿಯಲ್ಲಿ ಕೆ.ವಾಸು ಎಂಬ ವ್ಯಕ್ತಿ ನೀಡಿದ್ದ ದೂರಿನ ಮೇರೆಗೆ ವಿಗ್ರಹ ವಿಭಾಗವು ಎಫ್‌ಐಆರ್ ದಾಖಲಿಸಿಕೊಂಡಿತ್ತು. ಐಡಲ್ ವಿಂಗ್ ಇನ್ಸ್‌ಪೆಕ್ಟರ್ ಎಂ.ಚಿತ್ರಾ ಎಂಬುವವರು ತನಿಖೆ ಕೈಗೆತ್ತಿಕೊಂಡಿದ್ದರು. ವಿದೇಶದಲ್ಲಿರುವ ವಿವಿಧ ವಸ್ತು ಸಂಗ್ರಹಾಲಯಗಳು ಮತ್ತು ಹರಾಜು ಕೇಂದ್ರಗಳಲ್ಲಿ ಚೋಳರ ಕಾಲದ ಪಾರ್ವತಿ ವಿಗ್ರಹಗಳ ಶೋಧಕಾರ್ಯ ಆರಂಭಿಸಿದ್ದರು.
ಇದನ್ನೂ ಓದಿ:ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಬಿರುಕು: ಮಹತ್ವದ ಸಭೆ ಕರೆದ ಸಿಎಂ ನಿತೀಶ್ ಕುಮಾರ್
ಶೋಧಕಾರ್ಯದ ಬಳಿಕ ನ್ಯೂಯಾರ್ಕ್‌ನ ಬೊನ್ಹಾಮ್ಸ್ ಹರಾಜು ಹೌಸ್‌ನಲ್ಲಿ ವಿಗ್ರಹ ಕಂಡುಬಂದಿದೆ. 12ನೇ ಶತಮಾನದ ತಾಮ್ರ ಮಿಶ್ರಲೋಹದ ವಿಗ್ರಹವಿದು. ಸುಮಾರು 52 ಸೆಂ.ಮೀ ಎತ್ತರವಿದ್ದು, ಒಟ್ಟು ಮೌಲ್ಯ ಸುಮಾರು 1,68,26,143 ರೂ ಎಂದು ತಿಳಿದು ಬಂದಿದೆ. ವಿಗ್ರಹವನ್ನು ಮರಳಿ ಭಾರತಕ್ಕೆ ತರಲು ಎಲ್ಲ ದಾಖಲಾತಿ ಸಂಗ್ರಹ ಮಾಡಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.