ಬೆಂಗಳೂರು: ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡುವ ಉತ್ಸಾಹ ಇದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದರೆ ನಿಮಗೆ ಇಲ್ಲೊಂದು ಬಂಪರ್ ಉದ್ಯೋಗಾವಕಾಶವಿದೆ. ದೇಶಾದ್ಯಂತ 600 ಹುದ್ದೆಗಳ ಭರ್ತಿಗೆ ಇಂಡಸ್ಟ್ರೀಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ - ಐಡಿಬಿಐ ಅರ್ಜಿ ಆಹ್ವಾನಿಸಿದೆ. ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಬ್ಯಾಂಕ್ ಮುಂದಾಗಿದ್ದು, ಈ ಸಂಬಂಧ ಈಗಾಗಲೇ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಕಾಶವನ್ನು ಇದೀಗ ವಿಸ್ತರಿಸಿದ್ದು, ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ, ವಿದ್ಯಾಭ್ಯಾಸ ಸೇರಿದಂತೆ ಇನ್ನಿತರ ಪ್ರಮುಖ ಅಂಶಗಳ ಮಾಹಿತಿ ಇಲ್ಲಿದೆ..
ಹುದ್ದೆ ವಿವರ: ದೇಶಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಐಡಿಬಿಐ ಒಟ್ಟು 600 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ನೇಮಕಾತಿ ದೇಶಾದ್ಯಂತ ನಡೆಯಲಿದ್ದು, ದೇಶದ ಎಲ್ಲಾ ರಾಜ್ಯದ ಪದವಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾಭ್ಯಾಸ: ಈ ಹುದ್ದೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ: ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21ವರ್ಷವಾಗಿದ್ದು, ಗರಿಷ್ಠ ವಯೋಮಿತಿ - 30 ವರ್ಷ. ಜನವರಿ 1, 2023ಕ್ಕೆ ಒಳಗೆ ಅವರ ವಯೋಮಿತಿ 30ವರ್ಷ ತುಂಬಿರಬೇಕು. ಇನ್ನು ಒಬಿಸಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ಮಾಡಿದ್ದು, ಪ. ಜಾ, ಪ.ಪಂ, ಇಸಿಒ, ಎಸ್ಎಸ್ಸಿಒ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ 200 ರೂ. ನಿಗದಿ ಮಾಡಿದ್ದು, ಇತರೆ ಅಭ್ಯರ್ಥಿಗಳಿ 1000 ರೂ. ನಿಗದಿ ಮಾಡಲಾಗಿದೆ. ಈ ಅರ್ಜಿ ಶುಲ್ಕಗಳನ್ನು ಅಭ್ಯರ್ಥಿಗಳು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.