ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಬಳಿಯಿದ್ದ 81.5 ಕೋಟಿ ನಾಗರಿಕರ ವೈಯಕ್ತಿಕ ಮಾಹಿತಿಗಳನ್ನು ಕದ್ದು, ಅವುಗಳನ್ನು ಡಾರ್ಕ್ ವೆಬ್ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ. ಭಾರತೀಯ ನಾಗರಿಕರ ಆಧಾರ್ ಸಂಖ್ಯೆ ಮತ್ತು ಪಾಸ್ಪೋರ್ಟ್ ವಿವರಗಳು, ಹೆಸರುಗಳು, ಫೋನ್ ಸಂಖ್ಯೆ ಮತ್ತು ವಿಳಾಸಗಳಂಥ ಅನೇಕ ಸೂಕ್ಷ್ಮ ವೈಯಕ್ತಿಕ ಡೇಟಾಗಳು ಇದರಲ್ಲಿ ಸೇರಿವೆ ಎಂದು ವರದಿಗಳು ತಿಳಿಸಿವೆ.
ಪ್ರಕರಣದ ಗಂಭೀರತೆಯನ್ನು ಅರಿತ ಐಸಿಎಂಆರ್ ಈಗಾಗಲೇ ಈ ಬಗ್ಗೆ ದೂರು ದಾಖಲಿಸಿದ್ದು, ಕೇಂದ್ರ ತನಿಖಾ ದಳ (ಸಿಬಿಐ) ಈ ಘಟನೆಯ ಬಗ್ಗೆ ತನಿಖೆ ನಡೆಸುವ ಸಾಧ್ಯತೆಯಿದೆ. ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಮತ್ತು ಗುಪ್ತಚರ ಸಂಸ್ಥೆ ರೀಸೆಕ್ಯುರಿಟಿ (cybersecurity and intelligence firm Resecurity) ಈ ಬಗ್ಗೆ ಪ್ರಥಮ ಬಾರಿಗೆ ಮಾಹಿತಿ ನೀಡಿದ್ದು, "ಅಕ್ಟೋಬರ್ 9 ರಂದು, 'ಪಿಡಬ್ಲ್ಯೂಎನ್ 0001' ಎಂಬ ಹೆಸರಿನ ಸೈಬರ್ ವಂಚಕನು 815 ಮಿಲಿಯನ್ ಭಾರತೀಯ ನಾಗರಿಕರ ಆಧಾರ್ ಸಂಖ್ಯೆ ಮತ್ತು ಪಾಸ್ಪೋರ್ಟ್ ಮಾಹಿತಿಗಳು ಲಭ್ಯವಿವೆ ಎಂದು ಡಾರ್ಕ್ವೆಬ್ನ ಮಧ್ಯವರ್ತಿ ಫೋರಂಗಳಲ್ಲಿ ಪೋಸ್ಟ್ ಮಾಡಿದ್ದಾನೆ" ಎಂದು ಹೇಳಿದೆ.
ಡಾರ್ಕ್ವೆಬ್ನಲ್ಲಿ ಮಾರಾಟಕ್ಕೆ ಇಟ್ಟಿರುವ 10 ಸಾವಿರ ದಾಖಲೆಗಳ ಮಾದರಿಯೊಂದನ್ನು ಸೈಬರ್ ಸೆಕ್ಯೂರಿಟಿ ತಜ್ಞರು ಅಧ್ಯಯನ ಮಾಡಿದ್ದು, ಇದರಲ್ಲಿ ಭಾರತೀಯ ನಾಗರಿಕರಿಗೆ ಸಂಬಂಧಿಸಿದ ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ ಇದೆ ಎಂದು ಹೇಳಿದ್ದಾರೆ. ಇದರಲ್ಲಿನ ಮಾಹಿತಿಗಳನ್ನು ಭಾರತ ಸರ್ಕಾರದ Verify Aadhaar ಪೋರ್ಟಲ್ ಮೂಲಕ ಪರಿಶೀಲನೆ ಮಾಡಲಾಗಿದ್ದು, ಈ ಆಧಾರ್ ಸಂಖ್ಯೆಗಳು ನೈಜವಾಗಿವೆ ಎಂದು ತಿಳಿದು ಬಂದಿದೆ.