ಮುಂಬೈ:ಡಿಸೆಂಬರ್ 26, 2022 ರಂದು ಸಿಬಿಐ ತನ್ನನ್ನು ಬಂಧಿಸಿದ ಕ್ರಮ ಕಾನೂನು ಬಾಹಿರವಾಗಿದೆ ಎಂದು ಹೇಳುವ ಮೂಲಕ ಮಧ್ಯಂತರ ಜಾಮೀನು ಕೋರಿ ವಿಡಿಯೋಕಾನ್ ಗ್ರೂಪ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಮಾಡಿದ ಮನವಿಗೆ ಉತ್ತರ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದೆ. ಈ ಮುನ್ನ ಜನವರಿ 5 ರಂದು ವಿಶೇಷ ಸಿಬಿಐ ನ್ಯಾಯಾಲಯವು ಧೂತ್ ಅವರ ಮನವಿಯನ್ನು ತಿರಸ್ಕರಿಸಿತ್ತು.
ತನ್ನ ಕಕ್ಷಿದಾರರು ಶೇ 90 ರಷ್ಟು ಹೃದಯನಾಳ ಕಾಯಿಲೆಯಿಂದ ಬಳಲುತ್ತಿರುವುದರಿಂದ ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಧೂತ್ ಪರ ವಕೀಲರು ಮನವಿ ಮಾಡಿದರು. ಆದರೆ, ಕೇಂದ್ರೀಯ ತನಿಖಾ ದಳ ತನ್ನ ಪ್ರತಿಕ್ರಿಯೆ ನೀಡಲು ಸಮಯಾವಕಾಶ ನೀಡಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿತು. ಈ ಸಂದರ್ಭದಲ್ಲಿ ತನ್ನ ಪ್ರತಿಕ್ರಿಯೆ ಸಲ್ಲಿಸಲು ಸಿಬಿಐ ಒಂದು ವಾರದ ಸಮಯಾವಕಾಶ ಕೇಳಿದೆ. ಆದರೆ, ಜನವರಿ 13ರೊಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಸೂಚಿಸಿದ್ದು, ಅವತ್ತೇ ಅರ್ಜಿಯ ಮೇಲೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿತು.
ಸೋಮವಾರ ಹೈಕೋರ್ಟ್ ಮೊರೆ ಹೋದ ಧೂತ್, ಸಿಬಿಐ ದಾಖಲಿಸಿದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ್ದಾರೆ. ವಿಡಿಯೋಕಾನ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಡಿಸೆಂಬರ್ 23 ರಂದು ಸಿಬಿಐ ಬಂಧಿಸಿತ್ತು. ಮೂರು ದಿನಗಳ ನಂತರ ಧೂತ್ ಅವರನ್ನು ಬಂಧಿಸಲಾಗಿತ್ತು. ಆದರೆ, ಸೋಮವಾರ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದರಿಂದ ಕೊಚ್ಚರ್ ದಂಪತಿ ಮಂಗಳವಾರ ಬೆಳಗ್ಗೆ ಜೈಲಿನಿಂದ ಹೊರ ಬಂದಿದ್ದಾರೆ.