ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಪಾಕಿಸ್ತಾನದಲ್ಲಿ ಕುಳಿತು ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯ ನಡೆಸುವ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಿರ್ಣಾಯಕ ಕ್ರಮ ಕೈಗೊಂಡಿದೆ. ಸದ್ಯ ಪಾಕಿಸ್ತಾನದಲ್ಲಿರುವ ಉಗ್ರವಾದಿ ಮುಷ್ತಾಕ್ ಜರ್ಗಾರ್ ಅಲಿಯಾಸ್ ಲಾತ್ರಾಮ್ ಎಂಬಾತನ ಆಸ್ತಿ ಪಾಸ್ತಿಗಳನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡಿದೆ. ಕಂದಹಾರ್ನಲ್ಲಿ 1999 ರಲ್ಲಿ ಹೈಜಾಕ್ ಆಗಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನ IC 814 ಇದರಲ್ಲಿದ್ದ ಪ್ರಯಾಣಿಕರ ಬಿಡುಗಡೆಗೆ ಪ್ರತಿಯಾಗಿ ಭಾರತೀಯ ಜೈಲಿನಿಂದ ಬಿಡುಗಡೆಯಾಗಿದ್ದ ಜೈಶ್ ಎ ಮೊಹಮ್ಮದ್ ಉಗ್ರವಾದಿ ಮಸೂದ್ ಅಜರ್ ಸಹಚರನೇ ಈ ಮುಷ್ತಾಕ್ ಜರ್ಗಾರ್. ಈತ ಕೂಡ ಮಸೂದ್ ಅಜರ್ ಜೊತೆಗೆ ಬಿಡುಗಡೆಯಾಗಿದ್ದ.
1989 ರಲ್ಲಿ ಮಾಜಿ ಕೇಂದ್ರ ಗೃಹ ಸಚಿವ, ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರ ಅಪಹರಣದಲ್ಲಿ ಕೂಡ ಜರ್ಗಾರ್ ಭಾಗಿಯಾಗಿದ್ದ. ಜರ್ಗಾರ್ ಈತ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ 'ನಿಯೋಜಿತ ವೈಯಕ್ತಿಕ ಭಯೋತ್ಪಾದಕ' ಎಂದು ಘೋಷಿಸಲ್ಪಟ್ಟಿದ್ದ. ಈತ ಬಿಡುಗಡೆಯಾದಾಗಿನಿಂದ ಪಾಕಿಸ್ತಾನದಲ್ಲಿದ್ದುಕೊಂಡು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ನೀಡುತ್ತಿದ್ದಾನೆ.
ಜರ್ಗಾರ್ ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್‌ನೊಂದಿಗೆ ಸಂಬಂಧ ಹೊಂದಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಿಗೆ ಕಾರಣನಾಗಿದ್ದ. ಹಲವಾರು ಕೊಲೆಗಳು ಸೇರಿದಂತೆ ಇತರ ಘೋರ ಅಪರಾಧಗಳಲ್ಲಿ ಭಾಗಿಯಾಗಿರುವ ಈತ, ಅಲ್-ಖೈದಾ ಮತ್ತು ಜೆಎಂನಂತಹ ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾನೆ.