ಜೈಪುರ(ರಾಜಸ್ಥಾನ):ಸೋಷಿಯಲ್ ಮೀಡಿಯಾದಲ್ಲಿ ಜನಮನ ಸೆಳೆಯುತ್ತಿರುವ ಜೈಸಲ್ಮೇರ್ ಜಿಲ್ಲಾಧಿಕಾರಿ ಟೀನಾ ದಾಬಿ ಅವರ ತಂಗಿ ಐಎಎಸ್ ರಿಯಾ ದಾಬಿ ಮಹಾರಾಷ್ಟ್ರ ಕೇಡರ್‌ನ ಐಪಿಎಸ್ ಮನೀಷ್ ಕುಮಾರ್ ಅವರನ್ನು ವಿವಾಹವಾಗಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಐಪಿಎಸ್ ಅಧಿಕಾರಿ ಮನೀಶ್ ಕುಮಾರ್ ಅವರ ಕೇಡರ್ ಅನ್ನು ಮಹಾರಾಷ್ಟ್ರದಿಂದ ರಾಜಸ್ಥಾನಕ್ಕೆ ಬದಲಾಯಿಸಿದೆ. ಇದರಲ್ಲಿ ಕೇಡರ್ ಬದಲಾವಣೆಗೆ ರಾಜಸ್ಥಾನ ಕೇಡರ್ ಐಎಎಸ್ ರಿಯಾ ದಾಬಿ ಅವರನ್ನು ಮದುವೆಯಾಗಿರುವುದು ಕಾರಣ ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಹೆಚ್‌ಎ) ನೀಡಿರುವ ನೋಟಿಸ್‌ನಲ್ಲಿ ಹೇಳಲಾಗಿದೆ. ಡಿಒಪಿಟಿಯ ಅಧಿಸೂಚನೆ ಮತ್ತು ಅವರಿಬ್ಬರ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ರಿಯಾ ದಾಬಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಪ್ರೀತಿಸಿ ವಿವಾಹವಾದ ಜೋಡಿ:ಐಎಎಸ್ ರಿಯಾ ದಾಬಿ ಮತ್ತುಐಪಿಎಸ್ ಮನೀಶ್ ಕುಮಾರ್ ಇಬ್ಬರೂ ಯುಪಿಎಸ್ಸಿ-2021 ಬ್ಯಾಚ್‌ಗೆ ಸೇರಿದವರು. ಇಬ್ಬರ ನಡುವೆ ಮೊದಲು ಸ್ನೇಹವಿತ್ತು. ಬಳಿಕ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಇಬ್ಬರೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆಯ ಆಧಾರದ ಮೇಲೆ, ನಿಯಮಗಳ ಅಡಿಯಲ್ಲಿ ಮನೀಶ್ ಕೇಡರ್ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಕೇಂದ್ರ ಗೃಹ ಸಚಿವಾಲಯವು ಅಂಗೀಕರಿಸಿತ್ತು ಮತ್ತು ಜೂನ್ 16 ರಂದು ಕೇಡರ್ ಬದಲಾವಣೆಗೆ ಅಧಿಸೂಚನೆಯನ್ನು ಹೊರಡಿಸಿತು.
ರಿಯಾ ದಾಬಿ ಬಗ್ಗೆ ಒಂದಿಷ್ಟು..ರಿಯಾ ದಾಬಿ 2015ರ ಯುಪಿಎಸಿ ಟಾಪರ್ ಟೀನಾ ದಾಬಿಯ ಕಿರಿಯ ಸಹೋದರಿ. ಟೀನಾ ದಾಬಿ ಪ್ರಸ್ತುತ ಜೈಸಲ್ಮೇರ್ ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದಾರೆ. ರಿಯಾ ದಾಬಿ 2021 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಅಲ್ವಾರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರು ಸಹೋದರಿಯರು ತುಂಬಾ ಸಕ್ರಿಯರಾಗಿದ್ದಾರೆ.