ಹರಿಯಾಣ: ಭಾರತೀಯ ಆಡಳಿತ ಸೇವೆಯ (ಐಎಎಸ್) ಹಿರಿಯ ಅಧಿಕಾರಿ ಅಶೋಕ್ ಖೇಮ್ಕಾ ಅವರು ಜನವರಿ 23 ರಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಪೋಸ್ಟಿಂಗ್ ಕುರಿತಂತೆ ವಿಶೇಷ ಪತ್ರವೊಂದನ್ನು ಬರೆದಿದ್ದಾರೆ. ಆದ್ರೆ, ಮುಖ್ಯಮಂತ್ರಿಗಳ ಕಚೇರಿಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಈ ಪತ್ರವಂತೂ ದೇಶದ ಗಮನ ಸೆಳೆದಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಖೇಮ್ಕಾ ಅವರನ್ನು ಪತ್ರಾಗಾರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ಜನವರಿ 9, 2023 ರಂದು ವರ್ಗಾಯಿಸಲಾಗಿತ್ತು. "ಪತ್ರಾಗಾರ ಇಲಾಖೆಯಲ್ಲಿ ದಿನಕ್ಕೆ ಕೇವಲ 8 ನಿಮಿಷಗಳ ಕಾಲ ಕೆಲಸ ಮಾಡುತ್ತಿದ್ದೇನೆ. ನನ್ನ ವಾರ್ಷಿಕ ವೇತನ 40 ಲಕ್ಷ ರೂಪಾಯಿ ಇದೆ. ಹಾಗಾಗಿ, ರಾಜ್ಯ ವಿಚಕ್ಷಣ ಇಲಾಖೆಗೆ (ಜಾಗೃತ ಇಲಾಖೆ) ಪೋಸ್ಟಿಂಗ್ ಮಾಡುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.
ಪಿ.ಕೆ.ಚಿನ್ನಸಾಮಿ ವರ್ಸಸ್ ತಮಿಳುನಾಡು ಸರ್ಕಾರ ಮತ್ತು ಇತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ 1987 ರ ತೀರ್ಪು ಉಲ್ಲೇಖಿಸಿದ ಖೇಮ್ಕಾ, "ಸಾರ್ವಜನಿಕ ಅಧಿಕಾರಿಗೆ ಪೋಸ್ಟಿಂಗ್ ನೀಡಬೇಕು. ಅವರು ಸ್ಥಾನಮಾನಕ್ಕೆ ಅನುಗುಣವಾಗಿ ಕೆಲಸ ಮಾಡಬೇಕು' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ" ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2025ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಲಿರುವ ಖೇಮ್ಕಾ, "ಖಟ್ಟರ್ ಅವರು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದರು. ಅವರು ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೆಸೆಯಲು ತಮ್ಮ ಸೇವಾ ವೃತ್ತಿಯನ್ನು ತ್ಯಾಗ ಮಾಡಿದ್ದಾರೆ. ನನ್ನನ್ನು ಪತ್ರಾಗಾರ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಜನವರಿ 9, 2023 ರಂದು ನಿಯೋಜಿಸಲಾಗಿದೆ. ಈ ಇಲಾಖೆಯ ವಾರ್ಷಿಕ ಬಜೆಟ್ ಕೇವಲ 4 ಕೋಟಿ ರೂಪಾಯಿ. ಅಂದರೆ ಒಟ್ಟು ರಾಜ್ಯ ಬಜೆಟ್‌ನ 0.0025% ಕ್ಕಿಂತ ಕಡಿಮೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನನ್ನ ವಾರ್ಷಿಕ ವೇತನ 40 ಲಕ್ಷ ರೂಪಾಯಿ. ಇದು ಇಲಾಖೆಯ ಒಟ್ಟು ಬಜೆಟ್‌ನ ಶೇ 10 ರಷ್ಟಿದೆ. ಪತ್ರಾಗಾರ ಇಲಾಖೆಯಲ್ಲಿ ವಾರಕ್ಕೆ 1 ಗಂಟೆಗಿಂತಲೂ ಹೆಚ್ಚಿನ ಕೆಲಸವಿಲ್ಲ. ನಾಗರಿಕ ಸೇವಾ ಮಂಡಳಿಯು ಶಾಸನಬದ್ಧ ನಿಯಮಗಳ ಪ್ರಕಾರ ಅಧಿಕಾರಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಪ್ರತಿಯೊಬ್ಬ ಅಧಿಕಾರಿಯ ಸಮಗ್ರತೆ, ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಗಣನೆಗೆ ತೆಗೆದುಕೊಂಡು ಶಿಫಾರಸುಗಳನ್ನು ಮಾಡಬೇಕು" ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಹೆಸರು: ಅಶೋಕ್ ಖೇಮ್ಕಾ, ಉದ್ಯೋಗ: IAS ಅಧಿಕಾರಿ, ತಪ್ಪು: ಪ್ರಾಮಾಣಿಕತೆ, ಶಿಕ್ಷೆ: 54 ಬಾರಿ ವರ್ಗಾವಣೆ!
"ಇತ್ತೀಚಿನ ದಿನಗಳಲ್ಲಿ ನಿಮಗೆ ತಿಳಿದಿರುವಂತೆ ಭ್ರಷ್ಟಾಚಾರ ಸರ್ವವ್ಯಾಪಿಯಾಗಿದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನಾನು ಯಾವಾಗಲೂ ಮುಂಚೂಣಿಯಲ್ಲಿದ್ದೇನೆ. ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯಲು ವಿಚಕ್ಷಣ(ಜಾಗೃತ) ಇಲಾಖೆ ಸರ್ಕಾರದ ಮುಖ್ಯ ಅಂಗವಾಗಿದೆ. ನನ್ನ ಸೇವಾ ವೃತ್ತಿ ಜೀವನದ ಕೊನೆಯ ದಿನಗಳನ್ನು ಜಾಗೃತ ವಿಭಾಗದ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತೇನೆ. ಒಂದು ವೇಳೆ ಅವಕಾಶ ನೀಡಿದ್ರೆ, ಭ್ರಷ್ಟಾಚಾರದ ವಿರುದ್ಧ ನಿಜವಾದ ಯುದ್ಧ ನಡೆಯಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಮತ್ತು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಯಾರನ್ನೂ ಬಿಡುವುದಿಲ್ಲ" ಎಂದಿದ್ದಾರೆ.
1991ರ ಬ್ಯಾಚ್‌ನ ಐಎಎಸ್ ಅಧಿಕಾರಿ ಖೇಮ್ಕಾ ಅವರ ಹಠಾತ್ ವರ್ಗಾವಣೆ ಕುರಿತಂತೆ ರಾಜ್ಯ ಸರ್ಕಾರ ಯಾವುದೇ ಕಾರಣವನ್ನು ಬಹಿರಂಗಪಡಿಸಿಲ್ಲ. ಒಟ್ಟು ನಾಲ್ಕನೇ ಬಾರಿಗೆ ಖೇಮ್ಕಾ ಅವರನ್ನು ಪತ್ರಾಗಾರ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ನಾಲ್ವರು ಹರಿಯಾಣ ಸಿವಿಲ್ ಸರ್ವೀಸಸ್ (ಎಚ್‌ಸಿಎಸ್) ಅಧಿಕಾರಿಗಳನ್ನು ಹೊರತುಪಡಿಸಿ ವರ್ಗಾವಣೆಗೊಂಡ ಏಕೈಕ ಐಎಎಸ್ ಅಧಿಕಾರಿ ಇವರು.