ಪಲಾಮು(ಜಾರ್ಖಂಡ್): ವ್ಯಕ್ತಿ ತನ್ನ ಸ್ಥಾನ ಮತ್ತು ಅಧಿಕಾರದಿಂದ ದೊಡ್ಡವನಾಗುವುದಿಲ್ಲ, ಅವನು ತನ್ನ ನಡವಳಿಕೆಯಿಂದ ದೊಡ್ಡವನಾಗುತ್ತಾನೆ ಎಂಬ ಮಾತಿದೆ. ಇಲ್ಲಿನ ಐಎಎಸ್ ಅಧಿಕಾರಿಯೊಬ್ಬರು ವರ್ಗಾವಣೆಯಾಗಿ ತೆರಳುವಾಗ ತಮ್ಮ ಕಚೇರಿಯ ಸೇವಕನ ಕಾಲು ಮುಟ್ಟಿ ಆಶೀರ್ವಾದ ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ಐಎಎಸ್ ಅಧಿಕಾರಿ ಎ ದೊಡ್ಡೆ ಅವರನ್ನು ಪಲಾಮು ಜಿಲ್ಲೆಯಿಂದ ದುಮ್ಕಾ ಜಿಲ್ಲೆಗೆ ವರ್ಗಾಯಿಸಲಾಗಿದೆ.
ಎ ದೊಡ್ಡೆ ತಮ್ಮ ಅಧಿಕಾರವನ್ನು ಐಎಎಸ್ ಅಧಿಕಾರಿ ಶಶಿರಂಜನ್ ರವರಿಗೆ ಇಂದು ಹಸ್ತಾಂತರಿಸಿದರು. ನಂತರ ತಮ್ಮ ಕಚೇರಿಯಲ್ಲಿ ಸೇವಕನಾಗಿರುವ ನಂದಲಾಲ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದು ಭಾವುಕರಾದರು. ನನ್ನ ತಂದೆ ಕೂಡ ಹಿಂದೆ ಸೇವಕರಾಗಿ ಕೆಲಸ ಮಾಡುತ್ತಿದ್ದರು, ನಂದಲಾಲ್ ಅವರು ತಮ್ಮ ತಂದೆಯ ವಯಸ್ಸಿನವರು. ಅವರು ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆ ಎ.ದೊಡ್ಡೆ ಅವರು ತಮ್ಮ ಕಚೇರಿಗೆ ಹೊಸದಾಗಿ ನಿಯೋಜನೆಗೊಂಡ ಮೂವರು ಸೇವಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಇದಕ್ಕೂ ಮುನ್ನ ಐಎಎಸ್ ಅಧಿಕಾರಿಗಳಾದ ಎ ದೊಡ್ಡೆ, ಪಲಾಮು ನೂತನ ಡಿಸಿ ಶಶಿರಂಜನ್ ಮತ್ತು ಡಿಡಿಸಿ ರವಿ ಆನಂದ್ ಒಟ್ಟಿಗೆ ಕಚೇರಿಗೆ ಆಗಮಿಸಿದರು. ಶಶಿರಂಜನ್ ಅವರು ಇಂದು ಪಲಾಮು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶಶಿರಂಜನ್ ಅವರನ್ನು ಈ ಹಿಂದೆ ಖುಂಟಿ ಜಿಲ್ಲೆಯ ಡಿಸಿಯಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಪಲಾಮು ಮಾಜಿ ಡಿಸಿ ಎ ದೊಡ್ಡೆ ಅವರು ಮಾತನಾಡಿ, ಪಲಾಮು ಜಿಲ್ಲೆಯ ಡಿಸಿಯಾಗಿ ಸಾಕಷ್ಟು ಅನುಭವ ಗಳಿಸಿದ್ದೇನೆ ಎಂದರು.