ನವ ದೆಹಲಿ:ದೇಶದಲ್ಲಿ 1,472 ಭಾರತೀಯ ಆಡಳಿತ ಸೇವೆ (ಐಎಎಸ್), 864 ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು 1,057 ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ ಎಂದು ಲೋಕಸಭೆಗೆ ಕೇಂದ್ರ ಸರ್ಕಾರ ಇಂದು ಮಾಹಿತಿ ನೀಡಿದೆ. 2022ರ ಜನವರಿ 1ರವರೆಗೆ ಒಟ್ಟಾರೆ 6,789 ಐಎಎಸ್, 4,984 ಐಪಿಎಸ್ ಹಾಗೂ 3,191 ಐಎಫ್ಎಸ್ ಮಂಜೂರಾತಿ ಹುದ್ದೆಗಳಿದ್ದು, ಕ್ರಮವಾಗಿ 5,317, 4,120 ಮತ್ತು 2,134 ಹುದ್ದೆಗಳು ಪ್ರಸ್ತುತ ಭರ್ತಿ ಇವೆ ಎಂದು ಕೇಂದ್ರ ಸಿಬ್ಬಂದಿ ಇಲಾಖೆಯ ರಾಜ್ಯ ಖಾತೆ ಸಚಿವ ಜೀತೇಂದ್ರ ಸಿಂಗ್ ಲಿಖಿತ ಉತ್ತರ ಒದಗಿಸಿದರು.
ಖಾಲಿ ಹುದ್ದೆಗಳು ಭರ್ತಿಯ ನಿರಂತರ ಪ್ರಕ್ರಿಯೆಯಾಗಿದೆ. ಕೇಂದ್ರ ಸರ್ಕಾರ ಹುದ್ದೆಗಳನ್ನು ತ್ವರಿತವಾಗಿ ತುಂಬುತ್ತಿದೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪ್ರತಿ ವರ್ಷವೂ ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸುತ್ತಿದೆ. ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) ಮೂಲಕ 2021ರವರೆಗೆ ಐಎಎಸ್ ಅಧಿಕಾರಿಗಳ ವಾರ್ಷಿಕ ಸೇವೆಯನ್ನು 180ಕ್ಕೆ ಸರ್ಕಾರ ಹೆಚ್ಚಿಸಿದೆ. ಇದಲ್ಲದೆ, ಸಿಎಸ್‌ಇ -2022ರಿಂದ 2030ರ ವರೆಗೆ ಪ್ರತಿ ವರ್ಷ ನೇರ ನೇಮಕಾತಿಗೆ ಐಎಎಸ್ ಅಧಿಕಾರಿಗಳನ್ನು ಶಿಫಾರಸು ಮಾಡಲು ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.