ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ್ ನೇಮಕಾತಿ ಯೋಜನೆಯಡಿ ಇಲ್ಲಿಯವರೆಗೆ 7,49,899 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ತಿಳಿಸಿದೆ. ನೋಂದಣಿ ಪ್ರಕ್ರಿಯೆಯು ಜೂನ್ 24 ರಂದು ಪ್ರಾರಂಭವಾಗಿದ್ದು, ಮಂಗಳವಾರ ಕೊನೆಗೊಂಡಿದೆ.
ಜೂನ್ 14ರಂದು ಯೋಜನೆ ಘೋಷಣೆಯಾದ ನಂತರ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಸುಮಾರು ಒಂದು ವಾರ ಪ್ರತಿಭಟನೆಗಳು ನಡೆದು, ಪ್ರತಿಪಕ್ಷಗಳು ಸತತವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಈ ಯೋಜನೆಯಲ್ಲಿ ಪಿಂಚಣಿ ಹಾಗೂ ಸೇವಾ ಭದ್ರತೆ ಇಲ್ಲ ಎಂಬ ಕಾರಣದಿಂದ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಬಿಹಾರದಲ್ಲಿ ಭಾರಿ ಹಿಂಸಾಚಾರವೂ ನಡೆದಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಸೇನೆ ಸೇರುವ ವಯೋಮಿತಿಯನ್ನು 21 ರಿಂದ 23ಕ್ಕೇರಿಸಿ ಆದೇಶ ಹೊರಡಿಸಿತ್ತು.