ಕಾನ್ಪುರ (ಉತ್ತರ ಪ್ರದೇಶ): ಕೋವಿಡ್ ಮೂರನೇ ಅಲೆಯ ಭೀತಿಯಲ್ಲಿ ದೇಶದ ಜನರು ಇರುವ ಈ ಸಂದರ್ಭದಲ್ಲಿ ಝಿಕಾ ವೈರಸ್ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಮೊದಲ ಝಿಕಾ ವೈರಸ್ ಪತ್ತೆಯಾಗಿದ್ದು, ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಾನ್ಪುರದ ವಾಯುಪಡೆ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಸೋಂಕಿತ ಅಧಿಕಾರಿಯು ಕಳೆದ ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಅವರನ್ನು ನಗರದ ವಾಯುಪಡೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ರಕ್ತದ ಮಾದರಿಯಲ್ಲಿ ಕೆಲವು ನಿಗೂಢ ಲಕ್ಷಣಗಳು ಕಂಡು ಬಂದ ಪರಿಣಾಮ, ಬ್ಲಡ್ ಸ್ಯಾಂಪಲ್ ಅನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್‌ಐವಿ) ಕಳುಹಿಸಲಾಗಿದ್ದು, ಝಿಕಾ ವೈರಸ್ ತಗುಲಿರುವುದು ತಿಳಿದು ಬಂದಿದೆ ಎಂದು ಕಾನ್ಪುರ ಮುಖ್ಯ ವೈದ್ಯಕೀಯ ಅಧಿಕಾರಿ ನೇಪಾಲ್ ಸಿಂಗ್ ಮಾಹಿತಿ ನೀಡಿದ್ದಾರೆ.
ವೈರಸ್ ಹರಡುವುದನ್ನು ತಡೆಯಲು ಹತ್ತು ತಂಡಗಳನ್ನು ರಚಿಸಲಾಗಿದೆ. ಇದೀಗ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ 22 ಜನರ ಸ್ಯಾಂಪಲ್ಗಳನ್ನು ಎನ್‌ಐವಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ಏನಿದು ಝಿಕಾ ವೈರಸ್?
ಝಿಕಾ ವೈರಸ್, ಇದು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಗಳ ಮೂಲಕ ಹರಡುವ ವೈರಸ್ ಆಗಿದೆ. ಈ ವೈರಸ್ ದೇಹಕ್ಕೆ ಹೊಕ್ಕಿದರೂ ಕೆಲವರಲ್ಲಿ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಶೇಕಡಾ 80 ರಷ್ಟು ರೋಗಿಗಳಿಗೆ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ. ಒಂದು ವೇಳೆ ಕಂಡು ಬಂದರೆ ಜ್ವರ, ಮೈ-ಕೈ ನೋವು ಮತ್ತು ಕಣ್ಣು ಕೆಂಪಾಗುವುದು ಇಂತಹ ಲಕ್ಷಣಗಳು ಕಂಡುಬರುತ್ತದೆ.