ನವದೆಹಲಿ:ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯುರಷ್ಯಾ ಮೂಲದ ಮಿಗ್ 21 ಯುದ್ಧ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿದೆ. ಈ ತಿಂಗಳ ಆರಂಭದಲ್ಲಿ ರಾಜಸ್ಥಾನದಲ್ಲಿ ಸಂಭವಿಸಿದ ಮಿಗ್ ವಿಮಾನ ದುರಂತಕ್ಕೆ ಕಾರಣ ನಿರ್ಧಾರವಾಗುವವರೆಗೂ ಹಾಗೂ ಐಎಎಫ್‌ನಲ್ಲಿರುವ ಎಲ್ಲ ಮಿಗ್ ಯುದ್ಧವಿಮಾನದ ಕೂಲಂಕಷ ತಪಾಸಣೆ ನಡೆಯುವವರೆಗೂ ಈ ವಿಮಾನದ 3 ಮೂರು ಸ್ಕ್ವಾಡ್ರನ್‌ಗಳನ್ನು ಬಳಕೆ ಮಾಡುವುದಿಲ್ಲ ಎಂದು ಭಾರತೀಯ ವಾಯುಸೇನೆ ತಿಳಿಸಿದೆ.
ಮೇ 8 ರಂದು ಸೂರತ್‌ಗಢದ ವಾಯುನೆಲೆಯಿಂದ ಹಾರಿದ್ದ ಮಿಗ್ ವಿಮಾನ ಹನುಮಾನ್‌ಗಢದ ಹಳ್ಳಿಯೊಂದರಲ್ಲಿ ಪತನಗೊಂಡಿತ್ತು. ಅಪಘಾತದಲ್ಲಿ ಮೂವರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದರು. ತನಿಖೆ ಮತ್ತು ಅಪಘಾತಕ್ಕೆ ಕಾರಣ ಕಂಡು ಹುಡುಕುವವರೆಗೆ ಮಿಗ್ 21 ಸೇವೆಯನ್ನು ನಿಷೇಧಿಸಲಾಗಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ಕಳೆದ 5 ದಶಕಗಳಿಂದ ಮಿಗ್ ಫೈಟರ್ ಜೆಟ್‌ನ ವಿವಿಧ ಆವೃತ್ತಿಗಳು ಭಾರತೀಯ ಏರ್‌ಪೋರ್ಸ್‌ಗೆ ಸೇರ್ಪಡೆಯಾಗುತ್ತಿವೆ. ಪ್ರಸ್ತುತ ವಾಯುಸೇನೆಯಲ್ಲಿ ಕೇವಲ ಮೂರು ಸ್ಕ್ವಾಡ್ರನ್‌ನ ಮಿಗ್-21 ಫೈಟರ್ ಜೆಟ್ ಕಾರ್ಯ ನಿರ್ವಹಿಸುತ್ತಿವೆ. ಇವಲ್ಲವೂ 2025ರ ವೇಳೆಗೆ ಸಂಪೂರ್ಣವಾಗಿ ಐಎಎಫ್‌ನಿಂದ ಹೊರಹಾಕಲ್ಪಡಲಿದೆ ಎಂದು ವಾಯುಸೇನೆ ಮಾಹಿತಿ ನೀಡಿದೆ.
ಇತ್ತೀಚೆಗೆ ತರಬೇತಿಯಲ್ಲಿದ್ದಾಗ ರಾಜಸ್ಥಾನದಲ್ಲಿ ಮನೆಯ ಮೇಲೆ ವಿಮಾನ ಬಿದ್ದಿತ್ತು. ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಅಪಘಾತಕ್ಕೆ ನಿಖರ ಕಾರಣ ಪತ್ತೆ ಮಾಡಲು ತನಿಖೆ ನಡೆಯುತ್ತಿದೆ. ಪ್ರಸ್ತುತ ಐಎಎಫ್‌ನಲ್ಲಿ 31 ಯುದ್ಧಸಜ್ಜಿತ ಏರ್‌ಕ್ರಾಫ್ಟ್ ಸ್ಕ್ವಾಡ್ರನ್‌ಗಳು ಕೆಲಸ ಮಾಡುತ್ತಿವೆ. ಇದರಲ್ಲಿ ಮೂರು ಸ್ಕ್ವಾಡ್ರನ್‌ಗಳು ಮಿಗ್ ಆವೃತ್ತಿಯದ್ದಾಗಿದೆ. 1960ರಲ್ಲಿ ಮಿಗ್ ಅನ್ನು ಐಎಎಫ್‌ಗೆ ಸೇರ್ಪಡೆ ಮಾಡಲಾಗಿತ್ತು. ಇಲ್ಲಿಯವರೆಗೂ ಐಎಎಫ್‌ನಲ್ಲಿ 800 ಮಿಗ್ ಯುದ್ಧ ವಿಮಾನದ ವಿವಿಧ ಆವೃತ್ತಿಗಳು ಸೇವೆ ನೀಡಿವೆ.