ಕೋಲ್ಕತ್ತಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ರಾಜಭವನದ ನಡುವಿನ ಸಂಘರ್ಷ ಹೆಚ್ಚು ಸದ್ದು ಮಾಡುತ್ತಿದೆ. ಈ ಹಿಂದೆ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಹಾಗೂ ಹಾಲಿ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಪ್ರಮುಖ ಮಸೂದೆಗಳನ್ನು ತಡೆ ಹಿಡಿಯುತ್ತಿದ್ದಾರೆ. ಒಂದು ರೀತಿಯಲ್ಲಿ ಬಿಜೆಪಿ ಪರವಾಗಿ ಇವರು ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಇದೆ. ಈ ಕುರಿತು 'ಈಟಿವಿ ಭಾರತ್' ಸಂದರ್ಶನದಲ್ಲಿ ಮಾತನಾಡಿದ ರಾಜ್ಯಪಾಲ ಬೋಸ್, ''ನಾನು ಭಾರತದ ಜನತೆಗಾಗಿ ಕೆಲಸ ಮಾಡುತ್ತಿದ್ದೇನೆ. ಭಾರತೀಯ ಜನತಾ ಪಕ್ಷಕ್ಕಾಗಿ ಅಲ್ಲ'' ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸುವ ಹೊಸ್ತಿಲಲ್ಲಿರುವ ಮಾಜಿ ಐಎಎಸ್ ಅಧಿಕಾರಿಯಾದ ಆನಂದ ಬೋಸ್, ''ನಾನು ಜನರಿಗಾಗಿ ಕೆಲಸ ಮಾಡುತ್ತೇನೆಯೇ ಹೊರತು ಪಕ್ಷಕ್ಕಾಗಿ ಅಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಆಡಳಿತಾತ್ಮಕ ಪ್ರದೇಶದಲ್ಲಿ ನೀವು ಕೆಲಸ ಮಾಡುವಾಗ ವ್ಯತ್ಯಾಸಗಳಿರಬಹುದು. ಆದರೆ, ಎರಡು ಸಾಂವಿಧಾನಿಕ ಸಂಸ್ಥೆಗಳ ನಡುವಿನ ಸಂಬಂಧವು ಹದಗೆಟ್ಟಿದೆ ಎಂದು ಅರ್ಥವಲ್ಲ. ಚುನಾಯಿತ ಸರ್ಕಾರವು ರಾಜ್ಯಪಾಲರ ಸಿದ್ಧಾಂತವನ್ನು ಅನುಸರಿಸುವ ನಿರೀಕ್ಷೆಯಿಲ್ಲ. ನಾವು ಒಪ್ಪದಿರಲು, ಒಪ್ಪಿಕೊಳ್ಳುವುದು ಪ್ರಜಾಪ್ರಭುತ್ವದ ಸ್ವರೂಪವಾಗಿದೆ. ನಾವು ಅದನ್ನು ಎಲ್ಲ ನಮ್ರತೆಯಿಂದ ಮಾಡಬೇಕಾಗುತ್ತದೆ'' ಎಂದು ತಿಳಿಸಿದರು.
ಪ್ರತಿ ವಿಷಯದಲ್ಲೂ ಒಂದೇ ದೃಷ್ಟಿಕೋನ ಇರಲ್ಲ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಸೂದೆಗಳ ಬಾಕಿ ಉಳಿಸಿಕೊಳ್ಳುವುದು ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯಪಾಲರನ್ನು ತೀವ್ರವಾಗಿ ಟೀಕಿಸಿದ್ದಾರೆ. ರಾಜಭವನದೊಳಗೆ ಧರಣಿ ಕುಳಿತುಕೊಳ್ಳುವುದಾಗಿಯೂ ಅವರು ಎಚ್ಚರಿಸಿದ್ದು ಇದೆ. ಆದರೆ, ಮುಖ್ಯಮಂತ್ರಿಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಬೋಸ್ ಅವರು, ''ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ಕ್ರಿಯಾತ್ಮಕತೆಯನ್ನು ಎರಡು ವಿಭಿನ್ನ ಹಂತಗಳಲ್ಲಿ ನಾನು ಗ್ರಹಿಸುತ್ತೇನೆ. ವೈಯಕ್ತಿಕ ಮಟ್ಟದಲ್ಲಿ ನಮ್ಮ ಸಂಬಂಧವು ಸೌಹಾರ್ದತೆಯಿಂದ ನಿರೂಪಿಸಲ್ಪಟ್ಟಿದೆ. ಪರಸ್ಪರ ಗೌರವ ಮತ್ತು ತಿಳಿವಳಿಕೆಯ ಮೇಲೆ ಸ್ಥಾಪಿಸಲಾಗಿದೆ. ಆದಾಗ್ಯೂ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ವಿಶಾಲ ಸಂಬಂಧವನ್ನು ಪರಿಶೀಲಿಸುವಾಗ, ಚುನಾಯಿತ ಮುಖ್ಯಮಂತ್ರಿ ಮತ್ತು ನೇಮಕಗೊಂಡ ರಾಜ್ಯಪಾಲರು ಯಾವಾಗಲೂ ಪ್ರತಿಯೊಂದು ವಿಷಯದಲ್ಲೂ ಒಂದೇ ದೃಷ್ಟಿಕೋನವನ್ನು ಹಂಚಿಕೊಳ್ಳುವುದಿಲ್ಲ ಎಂಬುದನ್ನು ಗುರುತಿಸುವುದು ಅತ್ಯಗತ್ಯ'' ಎಂದರು.