ಚೆನ್ನೈ (ತಮಿಳುನಾಡು):ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಒಂದೇ ಒಂದು ಸ್ಥಾನವನ್ನು ಪಡೆಯುವಲ್ಲಿ ವಿಫಲವಾಗಿದ್ದರೂ ಕೂಡ, ಮಕ್ಕಳ್ ನೀಧಿ ಮೈಯಮ್ (ಎಂಎನ್ಎಂ) ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ತಮ್ಮ ಕೊನೆಯ ಉಸಿರಿರುವ ವರೆಗೂ ರಾಜಕೀಯದಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಕಮಲ್ ಹಾಸನ್, "ಚುನಾವಣಾ ಸೋಲು ನನ್ನನ್ನು ತಡೆಯುವುದಿಲ್ಲ. ನನ್ನ ಕೊನೆಯ ಉಸಿರಿರುವ ವರೆಗೂ ನಾನು ರಾಜಕೀಯದಲ್ಲಿ ಇರುತ್ತೇನೆ. ರಾಜಕೀಯ ಇರುವವರೆಗೂ ಮಕ್ಕಳ್ ನೀಧಿ ಮೈಯಮ್ ಪಕ್ಷ ಇರುತ್ತದೆ. ಕೆಲವೇ ವ್ಯಕ್ತಿಗಳು ಪಕ್ಷವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಯಸಿದ್ದರು. ಆದರೆ ಇದು ಮರುಕಳಿಸುವುದಿಲ್ಲ. ಕಷ್ಟಪಟ್ಟು ದುಡಿಯುವ ಕಾರ್ಯಕರ್ತರ ಕೈಗಳು ಅಧಿಕಾರವನ್ನು ಪಡೆಯುತ್ತವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಮಲ್ ಹಾಸನ್‌ಗೆ ಸೋಲುಣಿಸಿದ 'ಕಮಲ' ಪಕ್ಷದ ನಾಯಕಿ ವನತಿ ಶ್ರೀನಿವಾಸನ್
ಎಂಎನ್ಎಂ ಪಕ್ಷದ ರೂಪಾಂತರದ ಆವೃತ್ತಿಯನ್ನು ನೀವು ನೋಡಲಿದ್ದೀರಿ. ಮೊದಲಿನಿಂದಲೂ ನಮ್ಮ ಸಿದ್ಧಾಂತದಲ್ಲಿ ಸ್ಪಷ್ಟತೆ ಮತ್ತು ನಮ್ಮ ಹಾದಿಯಲ್ಲಿ ಪ್ರಾಮಾಣಿಕತೆ ಇರುವುದರಿಂದ ನಮ್ಮ ಜರ್ನಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಮಲ್ ಹಾಸನ್ ಅವರು ದಕ್ಷಿಣ ಕೊಯಮತ್ತೂರು ಕ್ಷೇತ್ರದಿಂದ ಸ್ಫರ್ಧಿಸಿ, ಬಿಜೆಪಿಯ ವನತಿ ಶ್ರೀನಿವಾಸನ್ ವಿರುದ್ಧ ಸೋಲುಂಡಿದ್ದರು. ಅಲ್ಲದೇ ಎಂಎನ್ಎಂ ಪಕ್ಷದ ಯಾವೊಬ್ಬ ಅಭ್ಯರ್ಥಿಯೂ ಗೆಲುವಿನ ನಗೆ ಬೀರಿರಲಿಲ್ಲ. ಪಕ್ಷದ ಮುಖ್ಯಸ್ಥನೇ ಸೋತಿರುವಾಗ ನಮಗೆಲ್ಲಿ ಇನ್ನು ಧೈರ್ಯ ಉಳಿದಿದೆ ಎಂದು ಪಕ್ಷದ ಉಪಾಧ್ಯಕ್ಷ ಆರ್.ಮಹೇಂದ್ರನ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಾಬು ಸೇರಿದಂತೆ ಪಕ್ಷದ ಅನೇಕ ಹಿರಿಯ ಸದಸ್ಯರು ಪಕ್ಷ ತೊರೆದಿದ್ದಾರೆ.