ಶ್ರೀನಗರ:ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಯತ್ನಿಸುತ್ತಿದ್ದ ವೇಳೆ ಭಾರತೀಯ ಸೇನೆಗೆ ಸಿಕ್ಕಿಬಿದ್ದಿರುವ, ಪಾಕಿಸ್ತಾನಿ ಉಗ್ರ ಬಾಬರ್ ಅಲಿ ಪತ್ರಾ (19), ತಾನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಯಾಗಿದ್ದು, ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯಿಂದ ತರಬೇತಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಜಮ್ಮು ಕಾಶ್ಮೀರಕ್ಕೆ ನುಸುಳಿ ಸೇನೆಯ ಕೈಗೆ ಜೀವಂತ ಸಿಕ್ಕಿಬಿದ್ದ ಉಗ್ರನಿಂದ ಪಾಕ್ ದುಷ್ಕೃತ್ಯ ಬಯಲು
ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಯತ್ನಿಸುತ್ತಿದ್ದ ವೇಳೆ ಭಾರತೀಯ ಸೇನೆಗೆ ಸಿಕ್ಕಿಬಿದ್ದಿರುವ ಪಾಕಿಸ್ತಾನಿ ಉಗ್ರ, ತಾನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ. ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯಿಂದ ತರಬೇತಿ ಪಡೆದಿದ್ದೇನೆ ಎಂದು ಒಪ್ಪಿಕೊಂಡಿದ್ದ.
ಮಾಧ್ಯಮದೊಂದಿಗೆ ಮಾತನಾಡುತ್ತಾ ಬಾಬರ್ ಅಲಿ ಪತ್ರಾ, 'ನಾನು ಪಾಕಿಸ್ತಾನದ ಒಕರ ಪಂಜಾಬ್ ನಿವಾಸಿ. ನನ್ನ ತಂದೆ ತೀರಿಕೊಂಡಿದ್ದಾರೆ. ಮನೆಯಲ್ಲಿ ನನ್ನ ತಾಯಿ ಮತ್ತು ಅಕ್ಕ ಇದ್ದಾರೆ. ಅಕ್ಕನಿಗೆ ಮದುವೆಯಾಗಿದೆ. ನಾನು ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನನಗೆ ಐಎಸ್‌ಐ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಅನಿಸ್ ಎಂಬಾತನ ಪರಿಚಯವಾಯಿತು. ಅವನು ನನಗೆ ಹಣ ನೀಡುವುದಾಗಿ ಹೇಳಿದ್ದ. ನನಗೆ ಬಡತನವಿದ್ದ ಕಾರಣ ನಾನು ಅವನೊಂದಿಗೆ ಹೋಗಿ ಲಷ್ಕರ್‌ಗೆ ಸೇರಿಕೊಂಡೆ. ನಮಗೆ ತರಬೇತಿ ನೀಡುವ ಸಮಯದಲ್ಲಿ ಅವರು ನಮಗೆ 20,000 ರೂ. ನೀಡುತ್ತಿದ್ದರು. ತರಬೇತಿ ಮುಗಿದ ಬಳಿಕ ನಮಗೆ 30,000 ರೂ.ಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದರು' ಎಂದು ಬಾಬರ್ ಅಲಿ ವಿವರಿಸಿದ್ದಾನೆ.
'ನಾವು ಭಾರತದ ಗಡಿ ನುಸುಳುತ್ತಿದ್ದ ವೇಳೆ ಭಾರತೀಯ ಸೇನೆಯು ನನ್ನ ಜೊತೆಗಿದ್ದ ಭಯೋತ್ಪಾದಕರಲ್ಲಿ ಒಬ್ಬನನ್ನು ಕೊಂದಿತು. ಆದರೆ ನಮ್ಮ ಜೊತೆಗಿದ್ದ ಉಳಿದ ನಾಲ್ವರು ಪರಾರಿಯಾಗಿದ್ದಾರೆ. ನಾನು ಭಯದಿಂದ ಅಲ್ಲೇ ಕುಳಿತೆ. ಸೈನಿಕರು ನನ್ನನ್ನು ಬಂಧಿಸಿದರು. ನಾವು ಒಳನುಸುಳಿಕೊಂಡು ನೇರವಾಗಿ ಪಟಾನ್ಗೆ ಹೋಗಬೇಕಾಗಿತ್ತು' ಎಂದು ಆತ ತಿಳಿಸಿದ್ದಾನೆ.