ಮುಂಬೈ (ಮಹಾರಾಷ್ಟ್ರ):ದೇಶದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಮರಾಠಿಗರು ಎಂಬ ಕಚೇರಿ ಆರಂಭಿಸಲು ಬಾಡಿಗೆಗೆ ಕಟ್ಟಡ ನೀಡಲ್ಲ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕಿ ಹಾಗೂ ಮಾಜಿ ಶಾಸಕಿ ಪಂಕಜಾ ಮುಂಡೆ ಸಹ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಾನು ಮರಾಠಿ ಎಂಬ ಕಾರಣಕ್ಕೆ ನನಗೆ ಮುಂಬೈನಲ್ಲಿ ಮನೆ ನಿರಾಕರಿಸಲಾಗಿತ್ತು ಎಂದು ಪಂಕಜಾ ಮುಂಡೆ ತಿಳಿಸಿದ್ದಾರೆ.
ಇಲ್ಲಿನ ಮುಲುಂಡ್ ಉಪನಗರದಲ್ಲಿ ಗುಜರಾತಿ ಪ್ರಾಬಲ್ಯದ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ತೃಪ್ತಿ ದೇವರುಖ್ಕರ್ ಎಂಬ ಮಹಿಳೆ ತನಗೆ ಕಚೇರಿ ಕಟ್ಟಡ ಸ್ಥಳಾಂತರಕ್ಕೆ ತಡೆವೊಡ್ಡಲಾಗಿದೆ ಎಂದು ಆರೋಪಿಸಿದ್ದಾರೆ. ಬುಧವಾರ ಈ ಮಹಿಳೆ ಹಾಗೂ ಅಲ್ಲಿನ ಸಮಾಜದ ಸದಸ್ಯರ ನಡುವಿನ ಗಲಾಟೆಯ ವಿಡಿಯೋ ಬಹಿರಂಗವಾಗಿದೆ. ಈ ಘಟನೆ ಬಗ್ಗೆ ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ತೃಪ್ತಿ ದೇವರುಖ್ಕರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಗುಜರಾತ್ ಮೂಲದ ಪ್ರವೀಣ್ ಠಕ್ಕರ್ ಹಾಗೂ ಈತನ ಮಗ ನೀಲೇಶ್ ಠಕ್ಕರ್ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪಂಕಜಾ ಮುಂಡೆ ವಿಡಿಯೋ ಪೋಸ್ಟ್: ಮತ್ತೊಂದೆಡೆ, ಬಿಜೆಪಿಯ ನಾಯಕಿ ಪಂಕಜಾ ಮುಂಡೆ ಕೂಡ ತಾವು ಅಂತಹದ್ದೇ ಕಹಿ ಘಟನೆಯನ್ನು ಎದುರಿಸಿದ್ದಾಗಿ ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹೇಳಿಕೆಯೊಂದು ಪೋಸ್ಟ್ ಮಾಡಿದ್ದಾರೆ. ನಾನು ಮರಾಠಿ ಮಹಿಳೆಯ ನೋವನ್ನು ಗಮನಿಸಿದೆ. ಭಾಷೆ ಮತ್ತು ಸಂಕುಚಿತತೆಯಲ್ಲಿ ಸಿಲುಕಿಕೊಳ್ಳುವುದು ನನಗೆ ಇಷ್ಟವಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಪ್ರಾಂತೀಯತೆ, ಧಾರ್ಮಿಕತೆ ಅಥವಾ ಜಾತಿವಾದದ ಬಗ್ಗೆ ನಾನು ಎಂದಿಗೂ ಮಾತನಾಡಿಲ್ಲ. ಆದರೆ, ಮರಾಠಿ ಮಹಿಳೆಯೊಬ್ಬರು ಮರಾಠಿ ಎಂಬ ಕಾರಣಕ್ಕೆ ತನಗೆ ಮನೆ ನೀಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಾನು ನನ್ನ ಸರ್ಕಾರಿ ಮನೆಯನ್ನು ಬಿಟ್ಟು ಸ್ವಂತ ಮನೆ ಖರೀದಿಸಲು ಬಯಸಿದಾಗ ನನಗೂ ಅನೇಕ ಸ್ಥಳಗಳಲ್ಲಿ ಇದೇ ಅನುಭವವಾಗಿತ್ತು ಎಂದು ಪಂಕಜಾ ಮುಂಡೆ ತಿಳಿಸಿದ್ದಾರೆ.